(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.22. 2018ರ ಚುನಾವಣೆಯಲ್ಲೂ ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ ಎಂದು ಹೇಳಿದ್ದ ಸಿದ್ಧರಾಮಯ್ಯ ಇದೀಗ ರಾಗ ಬದಲಿಸಿದ್ದು, ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯುತ್ತದೆ. ನಂತರ ಮುಖ್ಯಮಂತ್ರಿ ಯಾರೆಂಬುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಣ್ಣಗಾಗಿದ್ದಾರೆ.
ಇಂದು ನೆಲಮಂಗಲ ತಾಲೂಕಿನ ಹಾಲಿಡೇ ಫಾರ್ಮ್ಸ್ ಹೋಟೆಲಿನಲ್ಲಿ ನಡೆದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಾಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದ ನಂತರ ಸಿ.ಎಂ. ಸಿದ್ಧರಾಮಯ್ಯ ತಣ್ಣಗಾದಂತಿದೆ. ಈ ಹಿಂದೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸಾರ್ವಜನಿಕವಾಗಿ ಘೋಷಿಸಿದ್ದ ಸಿದ್ಧರಾಮಯ್ಯರನ್ನು ಪತ್ರಕರ್ತರು ಮಾತನಾಡಿಸಿದಾಗ ಸಭೆಯಲ್ಲಿ ಸೇರಿದ್ದ ಯಾರೋ ಮುಂದಿನ ಮುಖ್ಯಮಂತ್ರಿ ನೀವೇ ಆಗಬೇಕು ಎಂದಿದ್ದಕ್ಕೆ ನಾನೇ ಆಗ್ತೇನೆ ಅಂತ ಹೇಳಿದ್ದೆ ಅಷ್ಟೆ ಎಂದು ಜಾರಿಕೊಂಡಿದ್ದಾರೆ. ಸಿದ್ಧರಾಮಯ್ಯರು ಮುಂದಿನ ಮುಖ್ಯಮಂತ್ರಿ ಎಂಬುವುದನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿರುವುದು ಕಾಂಗ್ರೆಸ್ಸಿನ ಹಲವು ನಾಯಕರಿಗೆ ಬೇಸರವನ್ನುಂಟುಮಾಡಿತ್ತು. ಕಾಂಗ್ರೆಸ್ಸಿನಲ್ಲಿ ಹಲವರು ಅವಕಾಶಕ್ಕಾಗಿ ಕಾದಿದ್ದು, ಆದರೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಸಿದ್ಧರಾಮಯ್ಯ ಕೇವಲ ಮೂರು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿದ್ದರು ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕರು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರವರಲ್ಲಿ ಈ ಬಗ್ಗೆ ದೂರಿಕೊಂಡಿದ್ದರೆನ್ನಲಾಗಿದೆ. ಈ ಬಗ್ಗೆ ಸಿದ್ಧರಾಮಯ್ಯರನ್ನು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿ ಕಳಿಸಿದ್ದರೆನ್ನಲಾಗಿದ್ದು, ಸಿದ್ಧರಾಮಯ್ಯ ತಣ್ಣಗಾಗಿದ್ದಾರೆ.