ಸರ್ಫಿಂಗ್: ಇಂದು ಚಾಲನೆ

(ನ್ಯೂಸ್ ಕಡಬ) newskadaba.com ಮ0ಗಳೂರು, ಮೇ .25. 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಶುಕ್ರವಾರ ಮಂಗಳೂರು ಹೊರವಲಯದ ಸಸಿಹಿತ್ಲು ಕಡಲಿನಲ್ಲಿ ಚಾಲನೆ ದೊರಕಲಿದೆ.
ಮೂರು ದಿನಗಳ ಕಾಲ ನಡೆಯುವ ಸರ್ಫಿಂಗ್ ಕ್ರೀಡಾಕೂಟ ಶುಕ್ರವಾರ ಬೆಳಿಗ್ಗೆ 7.30ಕ್ಕೆ ಪ್ರಾರಂಭವಾಗಲಿದ್ದು, ಬೆಳಿಗ್ಗೆ 10 ಗಂಟೆಗೆ ಕ್ರೀಡಾಕೂಟದ ಅಧಿಕೃತ ಉದ್ಘಾಟನೆ ನಡೆಯಲಿದೆ. ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಸರ್ಫಿಂಗ್ ಕ್ರೀಡೆಗೆ ಚಾಲನೆ ನೀಡಲಿದ್ದಾರೆ. 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಬಾಲಿವುಡ್ ಚಿತ್ರನಟ ಸುನೀಲ್ ಶೆಟ್ಟಿ ರಾಯಭಾರಿಯಾಗಲಿದ್ದಾರೆ. ಪ್ರತೀದಿನ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12.30ರವರೆಗೆ ಸಮುದ್ರದಲ್ಲಿ ಸಾಹಸಮಯ, ರೋಮಾಂಚನಕಾರಿ ಕ್ರೀಡೆಯು ನಡೆಯಲಿದೆ.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 120ಕ್ಕೂ ಅಧಿಕ ಕ್ರೀಡಾಪಟುಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಸರ್ಫಿಂಗ್ ಒಕ್ಕೂಟ ಹಾಗೂ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಈ ಸಂಸ್ಥೆಗಳು 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಮಾನ್ಯತೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೆನರಾ ಸರ್ಫಿಂಗ್ ಮತ್ತು ಜಲಕ್ರೀಡೆ ಉತ್ತೇಜನಾ ಸಂಸ್ಥೆ, ಮಂತ್ರ ಸರ್ಫ್ ಕ್ಲಬ್ ಜಂಟಿಯಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿದೆ. ಸಾರ್ವಜನಿಕರಿಗೆ ಈ ಕ್ರೀಡಾಕೂಟ ವೀಕ್ಷಿಸಲು ಮುಕ್ತ ಅವಕಾಶವಿದೆ.
ಸರ್ಫಿಂಗ್ ಕ್ರೀಡಾಕೂಟದೊಂದಿಗೆ ಸಸಸಿಹಿತ್ಲು ಕಡಲಕಿನಾರೆಯಲ್ಲಿ ಅತ್ಯಾಕರ್ಷಕ ಸಾಂಸ್ಕøತಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದಲ್ಲದೆ ಬೀಚ್ ವಾಲಿಬಾಲ್ ಸಹಿತ ವಿವಿಧ ಕ್ರೀಡಾಕೂಟಗಳು, ರುಚಿಕರ ಆಹಾರ ಖಾದ್ಯಗಳನ್ನೊಳಗೊಂಡ ಆಹಾರ ಉತ್ಸವವನ್ನೂ ಮೂರು ದಿನಗಳ ಸರ್ಫಿಂಗ್ ಕ್ರೀಡಾಕೂಟದ ಸಂದರ್ಭದಲ್ಲಿ ಆಯೋಜಿಸಲಾಗಿದೆ.

Also Read  ಭಟ್ಕಳ : ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ  ➤ ಇಬ್ಬರು ಯುವಕರು ಮೃತ್ಯು          

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಕ್ರೀಡಾ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಗರಿ ಮೂಡಿದೆ. ಶಾಂಭವಿ ನದಿಯು ಕಡಲನ್ನು ಸೇರುವ ಸುಂದರವಾದ ಅಳಿವೆ ಪ್ರದೇಶದಲ್ಲಿ ಈ ಕ್ರೀಡಾಕೂಟದ ಮೂಲಕ ಈ ಬೀಚಿನ ನಿಸರ್ಗ ರಮಣೀಯ ಸೌಂದರ್ಯವು ಹೊರಜಗತ್ತಿಗೆ ಕಾಣುವಂತಾಯಿತು.

ಮುಂದಿನ ದಿನಗಳಲ್ಲಿ ಈ ಸರ್ಫಿಂಗ್ ಕ್ರೀಡಾಕೂಟವನ್ನು ಪ್ರತೀವರ್ಷವೂ ನಿಗದಿತ ದಿನಾಂಕದಲ್ಲಿ ಏರ್ಪಡಿಸಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸರ್ಫಿಂಗ್ ಕೇಂದ್ರವನ್ನಾಗಿಸಲು ಕರ್ನಾಟಕ ಸರಕಾರವು ಪ್ರವಾಸೋದ್ಯಮ ಇಲಾಖೆಯ ಮೂಲಕ ವಿವಿಧ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ.

error: Content is protected !!