ಬೆಳ್ತಂಗಡಿ, ಡಿ. 16: ಪಿಕಪ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರರಿಬ್ಬರು ಮೃತಪಟ್ಟ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಗಳನ್ನು ಬೆಳ್ತಂಗಡಿ ತಾಲೂಕಿನ ನಾವೂರು ನಿವಾಸಿ ಶೇಷಪ್ಪ ಮೂಲ್ಯ(44) ಹಾಗೂ ಅವರ ಸಂಬಂಧಿ ನಾವೂರು ಜನತಾ ಕಾಲನಿ ನಿವಾಸಿ ಕಲ್ಯಾಣಿ(55) ಎಂದು ಗುರುತಿಸಲಾಗಿದೆ.ಭಾ
ರವಿವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಬೆಳ್ತಂಗಡಿಯಿಂದ ನಾವೂರು ಕಡೆಗೆ ತೆರಳುತ್ತಿದ್ದ ವೇಳೆ ಮಂಜೊಟ್ಟಿ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ಕಳೆದುಕೊಂಡು ಇವರು ಪ್ರಯಾಣಿಸುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಸೇಸಪ್ಪ ಮೂಲ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಲ್ಯಾಣಿ ಅವರನ್ನು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಕೊಂಡೊಯ್ಯುವ ವೇಳೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ