(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಮಂತೂರು ಪರೆಂಕಿಲ ಎಂಬಲ್ಲಿನ ಮನೆಯೊಂದರಲ್ಲಿ ಒಂಟಿಯಾಗಿದ್ದ ವಾಸಿಸುತ್ತಿದ್ದ ವೃದ್ಧೆಯ ಬರ್ಬರ ಕೊಲೆಗೈದ ಕೃತ್ಯ ನಡೆದು 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪರೆಂಕಿಲ ‘ಮಾತೃಶ್ರೀ ನಿವಾಸ’ದ ಶಾರದಾ ಶೆಟ್ಟಿ (75) ಎಂಬವರನ್ನು ಅದೇ ಗ್ರಾಮದ ತುಕರಾಮ ಶೆಟ್ಟಿ ಯಾನೆ ಬೊಗ್ಗು (54) ಎಂಬಾತ ಕೊಲೆಗೈದು ತಲೆಮರೆಸಿಕೊಂಡಿದ್ದನು. ಶನಿವಾರ ಸಂಜೆ ಘಟನೆ ನಡೆದಿದ್ದು, ಭಾನುವಾರದಂದು ಬೆಳಕಿಗೆ ಬಂದಿತ್ತು. ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರು ಮೂರು ಪೊಲೀಸ್ ತಂಡಗಳನ್ನು ರಚಿಸಿ ಕೃತ್ಯ ನಡೆದು 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ಶಾರದಾ ಶೆಟ್ಟಿ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಇವರ ಪುತ್ರಿ ಮುಂಬೈಯಲ್ಲಿ ವಾಸವಾಗಿದ್ದಾರೆ. ಆರೋಪಿಯು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದು ಕೊಲೆ ನಡೆಸಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ನಂತರ ಮೃತದೇಹವನ್ನು ಪ್ಲಾಸ್ಟಿಕ್ ಚೀಲ ಹಾಗೂ ತೆಂಗಿನ ಗರಿಗಳಿಂದ ಮುಚ್ಚಿಡಲಾಗಿತ್ತು.
ಘಟನೆ ನಡೆದ ಸ್ಥಳಕ್ಕೆ ಡಿಸಿಪಿಗಳಾದ ಲಕ್ಷ್ಮಿಗಣೇಶ್, ಅರುಣಾಂಶುಗಿರಿ, ಎಸಿಪಿ ಶ್ರೀನಿವಾಸ ಗೌಡ, ಮುಲ್ಕಿ ಸಿಐ ಜಯರಾಮ ಗೌಡ ಹಾಗೂ ಜಿಲ್ಲಾ ಶ್ವಾನದಳ, ಬೆರಳಚ್ಚು ತಜ್ಞರು, ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿ ಸಾಕ್ಷಿ ಕಲೆ ಹಾಕಿದ್ದಾರೆ. ಘಟನೆ ನಡೆದ 24 ಗಂಟೆಗಳೊಳಗೆ ಪೊಲೀಸ್ ತಂಡವು ಆರೋಪಿಯನ್ನು ಬಂಧಿಸಿರುವ ಸಾಹಸದ ಬಗ್ಗೆ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.