ಮಂಗಳೂರು, ಡಿ.14: ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾದ ಪ್ರಕರಣವು ಮಂಗಳೂರಿನ 2 ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.
ಉತ್ತರ ಭಾರತ ಮೂಲದ ನಿವಾಸಿ, ಪ್ರಸ್ತುತ ನಗರದಲ್ಲಿ ವಾಸವಾಗಿರುವ ಕಿಶೋರ್ ಭಯ್ಯಾ (36) ತನ್ನ 13 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ. 2016ರಲ್ಲಿ ಕಿಶೋರ್ ಭಯ್ಯಾನ ಪತ್ನಿ ಹೆರಿಗೆಗೆಂದು ಆಸ್ಪತ್ರಗೆ ದಾಖಲಾಗಿದ್ದ ಸಂದರ್ಭದಲ್ಲಿ ಕಿಶೋರ್ ಭಯ್ಯಾ ತನ್ನ ಪುತ್ರಿಯನ್ನು ಅತ್ಯಚಾರ ಮಾಡಿದ್ದು ಕೊಲೆ ಬೆದರಿಕೆ ಹಾಕಿದ್ದ. ಇದರಿಂದ ಬೆದರಿದ ಬಾಲಕಿ ಈ ವಿಷಯವನ್ನು ಯಾರಲ್ಲೂ ಹೇಳಿರಲಿಲ್ಲ. ಆ ಬಳಿಕ ಆರೋಪಿ ತಂದೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದು ಆ ಪರಿಣಾಮವಾಗಿ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಕುರಿತು ಬಾಲಕಿಯ ತಾಯಿ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಠಾಣಾ ಇನ್‌ಸ್ಪೆಕ್ಟರ್ ಕಲಾವತಿ ಈ ಕುರಿತು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಹಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 12 ಸಾಕ್ಷಿದಾರರನ್ನು ಹಾಗೂ 24 ದಾಖಲೆಗಳನ್ನು ಪರಿಗಣಿಸಲಾಗಿದೆ. ಮಗುವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದು ಮಗುವಿನ ತಂದೆ ಕಿಶೋರ್ ಭಯ್ಯಾ ಎಂದು ಖಚಿತವಾಗಿದ್ದು ಈ ಸಾಕ್ಷಿಗಳನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಸಾಬೀತು ಪಡಿಸಿ ಶಿಕ್ಷೆಯನ್ನು ಕಾಯ್ದಿರಿಸಿದೆ. ಸರಕಾರದ ಪರವಾಗಿ ವಿಶೇಷ ಅಭಿಯೋಜಕ ಸಿ. ವೆಂಕಟ ರಮಣ ಸ್ವಾಮಿ ವಾದಿಸಿದ್ದರು.