ಶಿಬಾಜೆ: ಶಾಲಾ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣ ➤ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಡಿ.13. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಶಾಲೆಯ ಮಕ್ಕಳು ಕುಡಿಯುವ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಕ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಹಾಗೂ ಮಕ್ಕಳು ಶಾಲಾ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

ಡಿಸೆಂಬರ್ 2 ರಂದು ಈ ಘಟನೆ ನಡೆದಿದ್ದು, ಬೆಳಗ್ಗೆ ಶಾಲೆಗೆ ಬಂದ ಮಕ್ಕಳು ಶಾಲೆಯ ಮುಂಭಾಗದಲ್ಲಿರುವ ಬಾವಿಯಿಂದ ನೀರನ್ನು ಕುಡಿದಿದ್ದರು. ಇದರಲ್ಲಿ ಸುಮಾರು ಎಂಟು ವಿದ್ಯಾರ್ಥಿಗಳು ತಕ್ಷಣ ಅಸ್ವಸ್ಥರಾಗಿದ್ದು, ಇವರ ಪೈಕಿ ನಾಲ್ಕು ವಿದ್ಯಾರ್ಥಿಗಳನ್ನು ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲು ಮಾಡಿದರೆ, ಉಳಿದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 81/2019 ರಂತೆ ಪ್ರಕರಣವೂ ದಾಖಲಾಗಿತ್ತು. ಮಾತ್ರವಲ್ಲದೆ ಈ ಬಗ್ಗೆ ಗ್ರಾಮಸ್ಥರು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳಿಗೂ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಮನವಿಯನ್ನು ನೀಡಿದ್ದರು.
ಭಯಭೀತರಾದ ಪಾಲಕರು ತಮಗೆ ನ್ಯಾಯ ಸಿಗದೇ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿದರು.

Also Read  ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪ ► ಕಾರ್ಕಳ ಶಾಸಕರ ವಿರುದ್ಧ ಕ್ರಮಕ್ಕೆ ಕಡಬ ಬ್ಲಾಕ್ ಕಾಂಗ್ರೆಸ್ ಆಗ್ರಹ

ಆದರೆ ಈ ತನಕ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಮತ್ತು ತೀರಾ ಬಡವರಾದ ತಮ್ಮ ಮಕ್ಕಳ ಜೀವಕ್ಕೆ ಬೆಲೆ ಇಲ್ಲ ಎಂಬುದಾಗಿ ಆರೋಪಿಸಿ ಮಕ್ಕಳು ಹಾಗೂ ಪೋಷಕರು ಇಂದು ಸುಡು ಬಿಸಿಲಿನಲ್ಲೂ ಬೀದಿಗಿಳಿದು ಪ್ರತಿಭಟನೆ ಮಾಡಿದರು.

ಪ್ರತಿಭಟನೆ ಬಗ್ಗೆ ಈ ಹಿಂದೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಲಾದರೂ ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರತಿಭಟನೆಗೆ ಅಧಿಕಾರಿಗಳು ಮಧ್ಯಾಹ್ನದ ನಂತರ ಆಗಮಿಸಿದ ಕಾರಣ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ತನಿಖೆ ಸಮರ್ಪಕವಾಗಿ ಮಾಡುತ್ತಿಲ್ಲ ಮತ್ತು
ತನಿಖೆಗೆ ಒತ್ತಡ ತರುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಬೆಳ್ತಂಗಡಿ ಶಾಸಕರು, ಧರ್ಮಸ್ಥಳ ಪೋಲೀಸರು, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಸೇರಿದಂತೆ ಹಲವರ ವಿರುದ್ಧ ಘೋಷಣೆಗಳನ್ನು ಕೂಗಿದರು.

Also Read  ಮಗುವಿಗೂ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಪ್ರಕರಣ ➤ ಕುಟುಂಬದ ಮೂವರೂ ಮೃತ್ಯು

ಮಧ್ಯಾಹ್ನ ಸುಮಾರು 2:45 ಗಂಟೆಗೆ ಸ್ಥಳಕಾಗಮಿಸಿದ ಬೆಳ್ತಂಗಡಿ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಹಾಗೂ ಬೆಳ್ತಂಗಡಿ ಉಪ ತಹಶಿಲ್ದಾರರಾದ ಪ್ರತೀಕ್ಷ್ ಕುಮಾರ್ ಅವರ ಮೂಲಕ ರಾಜ್ಯ ಪಾಲರು, ಮುಖ್ಯಮಂತ್ರಿಗಳು, ಗೃಹಸಚಿವರು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದು, ಆರೋಪಿಗಳ ಬಂಧನ ಕೂಡಲೇ ಆಗಬೇಕು ಎಂಬುದಾಗಿ ಪ್ರತಿಭಟನೆ ನಿರತ ಮಕ್ಕಳು ಹಾಗೂ ಪೋಷಕರು ಆಗ್ರಹಿಸಿದರು. ತಡವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪೋಷಕರು ಹಾಗೂ ಮಕ್ಕಳು ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು.

error: Content is protected !!
Scroll to Top