(ನ್ಯೂಸ್ ಕಡಬ) newskadaba.com, ಕಡಬ, ಡಿ.6 ಕಡಬ ತಾಲೂಕು ರಾಮಕುಂಜ ಗ್ರಾಮದ ಕಾಜರೊಕ್ಕು-ಶ್ರೀ ರಾಮಕುಂಜೇಶ್ವರ ದೇವಸ್ಥಾನ ರಸ್ತೆ ಕಾಂಕ್ರಿಟಿಕರಣಕ್ಕೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಲಾಯಿತು.
ಸುಳ್ಯ ಶಾಸಕ ಎಸ್ ಅಂಗಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಯೋಜನೆ ಸಮರ್ಪಕ ಅನುಷ್ಠಾನವಾಗಬೇಕಾದಲ್ಲಿ ಜನರ ಪಾತ್ರ ಮುಖ್ಯ. ಕಾಮಗಾರಿ ನಡೆಯುವ ಸಂದರ್ಭ ಜನರು ತ್ಯಾಗ ಮನೋಭಾವನೆ ತೋರ್ಪಡಿಸಿ ಅಭಿವೃದ್ದಿಗೆ ಕೈಜೋಡಿಸಬೇಕು. ಅಭಿವೃದ್ದಿ ಕಾಮಗಾರಿಗಳು ನಡೆಯುವಾಗ ಗುಣಮಟ್ಟ ಪರಿಶೀಲನೆ ನಡೆಸುವುದು ಆಯಾ ಭಾಗದ ಜನರ ಕರ್ತವ್ಯವಾಗಬೇಕು. ಈ ಹಿಂದೆ ನಮ್ಮನ್ನಾಳಿದ ಕಾಂಗ್ರೆಸ್ಸ್ ಸರಕಾರ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಅಭಿವೃದ್ದಿ ಮರಿಚಿಕೆಯಾಗಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿದೆ. ಪ್ರಸಕ್ತ ಸರಕಾರ ಕ್ಷೇತ್ರದ ಅಭಿವೃದ್ದಿ ವಿಶೇಷ ಅನುದಾನಗಳನ್ನು ಬಿಡುಗಡೆ ಮಾಡಿದ್ದು ಗ್ರಾಮೀಣ ಭಾಗದ ಅನೇಕ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮಾಡಲಾಗುತ್ತಿದೆ. ಬಹು ಬೇಡಿಕೆಯ ಕಾಜರೊಕ್ಕು-ಶ್ರೀ ರಾಮಕುಂಜೇಶ್ವರ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಶೀಘ್ರದಲ್ಲಿ ನಡೆದು ಲೋಕಾರ್ಪಣೆಯಾಗಲಿದೆ ಎಂದರು.
ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್ ಕೆ, ತಾಲೂಕು ಪಂಚಾಯಿತಿ ಸದಸ್ಯೆ ತೇಜಶ್ವಿನಿ ಕಟ್ಟಪುಣಿ, ಇಂಜಿನಿಯಾರ್ ಕಾಣಿಷ್ಕ, ಗುತ್ತಿಗೆದಾರ ದೀರಾಜ್ ನಾಯಕ್, ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯ ಕೇಶವ ಗಾಂದಿಪೇಟೆ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ, ಎ ವಿ ತೀರ್ಥರಾಮ, ಶ್ರೀ ರಾಮಕುಂಜೇಶ್ವರ ವಿದ್ಯಾ ವರ್ದಕ ಸಭಾ ಕಾರ್ಯದರ್ಶಿ ರಾಧಕೃಷ್ಣ ಕುವೆಚ್ಚಾರು , ಬಿಜೆಪಿ ಪ್ರಮುಖರಾದ ಶರತ್ ಕೆದಿಲ, ನೇಮಿರಾಜ್ ಶಾರದ ನಗರ, ಪ್ರಕಾಶ್ ಆಚಾರ್ಯ ಮೊದಲದಾವರು ಇದ್ದರು. ಬಿಜೆಪಿ ನೆಲ್ಯಾಡಿ ಶಕ್ತಿ ಕೇಂದ್ರ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಸ್ವಾಗತಿಸಿ ವಂದಿಸಿದರು.