✍? ಅಬ್ದುಲ್ ರಝಾಕ್ ಮರ್ಧಾಳ
ನನ್ನ ಭಾವನೆಯಲ್ಲಿ ಸ್ವಾಮಿಗಳೆಂದರೆ ರಾಘವೇಂದ್ರ ಸ್ವಾಮಿ, ಕೇರಳದ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಪೇಜಾವರ ಶ್ರೀ, ಶಿವಕುಮಾರ್ ಸ್ವಾಮಿಗಳು, ಬಾಲಾಗಂಗಾಧರಾನಾಥ ಸ್ವಾಮಿ, ನಿರ್ಮಲಾನಂದ ಸ್ವಾಮಿ, ವಿನಯ್ ಗುರೂಜಿ ಮೊದಲಾದವರಾಗಿದ್ದಾರೆ. ಯಾಕೆಂದರೆ ಈ ಮಹಾನ್ ವ್ಯಕ್ತಿಗಳು ಯಾವ ರೀತಿ ಮೇಣದ ಬತ್ತಿಯೊಂದು ತನ್ನನ್ನೇ ಸುಟ್ಟು ಕತ್ತಲಲ್ಲಿ ಇರುವವರಿಗೆ ಬೆಳಕನ್ನು ನೀಡುತ್ತದೆಯೋ ಅದೇ ರೀತಿ ಜೀವನದಲ್ಲಿ ಕತ್ತಲು ಆವರಿಸಿದವರಿಗೆ ತಮ್ಮ ಸೇವೆಯನ್ನು ನೀಡಿ ಬೆಳಕಿನೆಡೆಗೆ ನಡೆಸುವವರಾಗಿದ್ದಾರೆ. ಇಂತಹ ಸ್ವಾಮಿಗಳು ಜನರ ಮನಸ್ಸಿನಲ್ಲಿ ಸ್ವಾಮೀ ಎಂಬ ಪದಕ್ಕೆ ಪ್ರತ್ಯೇಕವಾದ ಗೌರವ, ಸ್ಥಾನಮಾನವನ್ನು ತಂದುಕೊಟ್ಟಿದ್ದಾರೆ.
ಇವರಿಂದಾಗಿಯೇ ಸ್ವಾಮಿ ಎಂಬ ಪದವನ್ನು ಕೇಳಿದಾಗ ಜನರಲ್ಲಿ ಭಕ್ತಿ, ಅಭಿಮಾನ, ಪ್ರೀತಿ, ವಾತ್ಸಲ್ಯ ತುಂಬಿ ತುಳುಕುತ್ತದೆ. ಭಾರತದಲ್ಲಿ ಹಿಂದೂ, ಮುಸ್ಲಿಂ, ಅಥವಾ ಕ್ರೈಸ್ತರು ಯಾರಾದರೂ ಸ್ವಾಮಿ ಎಂದರೆ ಬಹಳ ಗೌರವ ನೀಡುತ್ತಾರೆ. ಈ ಗೌರವಕ್ಕೆ ಕಾರಣ ಈ ಮೇಲೆ ಸೂಚಿಸಿರುವ ಹಾಗೂ ಸೂಚಿಸಲು ಬಿಟ್ಟು ಹೋದ ಸಾವಿರಾರು ನಿಷ್ಕಲಂಕ ಸ್ವಾಮಿಗಳ ನಿಷ್ಪಕ್ಷಪಾತ ಸೇವೆಯಿಂದಾಗಿದೆ.
ಎಲ್ಲಿ ಒಳ್ಳೆಯವರಿದ್ದಾರೆ ಅಲ್ಲಿ ಕೆಟ್ಟವರಿರುತ್ತಾರೆ ಎಂಬ ಮಾತಿನಂತೆ ಕೆಲವು ಒಳ್ಳೆಯ ಸ್ವಾಮಿಗಳ ನಡುವೆ ಕೆಲವು ಕಳ್ಳ ಸ್ವಾಮಿಗಳಿದ್ದಾರೆ. ಅವರು ಕಳ್ಳತನ ಮಾಡುತ್ತಿರುವುದು ವಸ್ತುಗಳನ್ನಲ್ಲ ಬದಲಿಗೆ ಈ ಒಳ್ಳೆಯ ಸ್ವಾಮಿಗಳು ಶತಶತಮಾನಗಳಿಂದ ನಿರ್ಮಿಸಿದ ಸ್ವಾಮಿ ಎಂಬ ಪದದ ವಿಶೇಷ ಗೌರವವನ್ನು, ಅಭಿಮಾನವನ್ನು ,ಸ್ಥಾನಮಾನಗಳನ್ನು.. ಎಲ್ಲದಕ್ಕಿಂತ ಹೆಚ್ಚಾಗಿ ಜನ ಸಾಮಾನ್ಯರ ನಂಬಿಕೆಯನ್ನಾಗಿದೆ.
ಆ ಕಳ್ಳ ಸ್ವಾಮಿಗಳ ವರ್ಗಕ್ಕೆ ಮಹಾರಾಜನೆಂದರೆ ಮತ್ಯಾರು ಅಲ್ಲ.. ತಮಿಳುನಾಡಿನ ರಾಜಶೇಖರ ಅಲಿಯಾಸ್ ಶ್ರೀ ಶ್ರೀ ಶ್ರೀ ನಿತ್ಯಾನಂದ ಸ್ವಾಮಿ. ಹೌದು ಆತನನ್ನು ಮಹಾರಾಜನೆನ್ನಲು ಕಾರಣವಿದೆ. ಯಾಕೆಂದರೆ 2010 ರಲ್ಲಿ ಸೆಕ್ಸ್ ಟೇಪ್ ಬಿಡುಗಡೆಯಾಗಿ ವಾರ್ತೆಯಲ್ಲಿದ್ದ ನಿತ್ಯಾನಂದ ಈಗ ಮತ್ತೊಮ್ಮೆ ವಾರ್ತೆಯಲ್ಲಿ ಇದ್ದಾನೆ. ಯಾವ ಘನ ಕಾರ್ಯಕ್ಕೆ ಎಂದು ಚಿಂತಿಸುವಿರಾ..? ಮತ್ಯಾವುದಕ್ಕೂ ಅಲ್ಲ. ಈಗ ಆತ ದಕ್ಷಿಣ ಅಮೇರಿಕಾದ ಸಮೀಪ ಕೈಲಾಸ ಎಂಬ ಒಂದು ದೇಶವನ್ನು ನಿರ್ಮಿಸಿದ್ದಾನಂತೆ. ಕೇವಲ ದೇಶ ಮಾತ್ರ ಅಲ್ಲ ದೇಶಕ್ಕೊಂದು ಧ್ವಜ, ರಾಷ್ಟ್ರಗೀತೆ, ರಾಷ್ಟ್ರಪ್ರಾಣಿ, ಸಂವಿಧಾನ, ಕಾನೂನು, ಮತ್ತು ದೇಶಕ್ಕೆ ಪ್ರಧಾನ ಮಂತ್ರಿಯ ಆಯ್ಕೆಯು ನಡೆದಿದೆ.
ಸ್ವಾಮಿ ನಿತ್ಯಾನಂದನ ಚರಿತ್ರೆಯ ಬಗ್ಗೆ ಹೇಳುವುದಾದರೆ 2008 ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತ ಬಾಲಕನನ್ನು ಕೊಲ್ಲಲು ಯತ್ನ ಮಾಡುತ್ತಾನೆ. ಯಾಕೆಂದರೆ ಆಶ್ರಮದಲ್ಲಿ ಈತನಿಗಿದ್ದ ಮಹಿಳೆಯರೊಂದಿಗಿನ ಅಕ್ರಮ ಸಂಬಂಧಗಳನ್ನು ಬಯಲಿಗೆಳಿಯುತ್ತಾನೆಂದು. ಇದಾದ ಎರಡು ವರ್ಷಗಳ ಬಳಿಕ ಅಂದರೆ 2010 ರಲ್ಲಿ ರಂಜಿತಾ ಎಂಬ ಸಿನಿಮಾ ತಾರೆಯೊಂದಿಗಿನ ಸೆಕ್ಸ್ ವೀಡಿಯೊ ಬಿಡುಗಡೆಯಾಗಿ ಈತನ ಅಸಲಿ ಮುಖ ಜನರಿಗೆ ತಿಳಿದಾಗ ಪರಾರಿಯಾಗಿ ನಂತರ ವಾರಾಣಾಸಿಯಲ್ಲಿ ಪತ್ತೆಯಾಗಿ ಜೈಲು ಸೇರುತ್ತಾನೆ. ನಿತ್ಯಾನಂದ ಸ್ವಾಮಿ ಯಾವ ರೀತಿಯಲ್ಲಿ ಅಪ್ರಾಪ್ತ ಬಾಲಕಿಯರನ್ನು ತನ್ನ ಮಾತಿನ ಮೂಲಕ ಮರುಳು ಮಾಡುತ್ತಾನೆಂದರೆ ಈತನ ಆಶ್ರಮದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಜನಾರ್ಧನ ಶರ್ಮಾ ಎಂಬಾತ ತನ್ನ ಮಕ್ಕಳನ್ನು ನಿತ್ಯಾನಂದನ ಆಶ್ರಮಕ್ಕೆ ಕಳುಹಿಸಿದಾಗ ಜನಾರ್ಧನ ಶರ್ಮಾರ ಮಕ್ಕಳ ಪೈಕಿ 18 ವರ್ಷದ ಯುವತಿಯನ್ನು ಅಪಹರಿಸುತ್ತಾನೆ ಈ ನಿತ್ಯಾನಂದ ಎಂಬ ಸ್ವಯಂ ಘೋಷಿತ ದೇವಮಾನವ.
ಇತ್ತೀಚಿಗೆ ಈತ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋದಲ್ಲಿ “ನಾನು ಧ್ವಜಾರೋಹಣ ಮುಗಿಸೋವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಸೂರ್ಯ 40 ನಿಮಿಷ ತಡವಾಗಿ ಹುಟ್ಟಿದನಂತೆ” ಎಂದು ಭರ್ಜರಿ ಬಿಲ್ಡಪ್ ಕೊಟ್ಟಿದ್ದ.
ಈಗ ಈತ ಪರಾರಿಯಾಗಿದ್ದು ಮೂರು ಅಪ್ರಾಪ್ತ ಮಕ್ಕಳನ್ನು ಅಪಹರಿಸಿದ್ದು, ಅದರಲ್ಲಿ ಇಬ್ಬರು ಬಾಲಕಿಯರು. ಅವರನ್ನು ದೇವರೇ ಕಾಪಾಡಬೇಕು.
ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಪೇಜಾವರ ಶ್ರೀ, ಶಿವಕುಮಾರ್ ಸ್ವಾಮಿಗಳು ಎಂಬ ನಿಷ್ಕಲಂಕ ಸ್ವಾಮಿಗಳ ನಡುವೆ ನಿತ್ಯಾನಂದನಂತೆ ಕಳ್ಳ ಸ್ವಾಮಿಗಳು ಅಲ್ಲಲ್ಲಿ ಹುಟ್ಟಿಕೊಳ್ಳಲು ಕಾರಣ ಯಾರು?? ನಮ್ಮಂತಹ ಸಾರ್ವಜನಿಕರ ಅಂಧ ಭಕ್ತಿಯೇ ಅದಕ್ಕೆ ಕಾರಣವಾಗಿದೆ. ಅಂತಹ ಅಂಧ ಭಕ್ತಿಯನ್ನು ಬಿಟ್ಟು ಸ್ವಾಮಿಗಳನ್ನು ನಂಬುವಾಗ ಎಲ್ಲವನ್ನು ವಿಮರ್ಶಿಸಿ ನಂಬಬೇಕು. ಇಲ್ಲಾ ಎಂದರೆ ಪವಿತ್ರವಾದ ಹಿಂದೂ ಧರ್ಮದ ಸಂಸ್ಕ್ರತಿ, ಆಚಾರ-ವಿಚಾರ ಎಲ್ಲವೂ ಮಣ್ಣು ಪಾಲಾಗಬಹುದು.
✍? ಅಬ್ಧುಲ್ ರಝಾಕ್ ಮರ್ಧಾಳ
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದ.ಕ.