ಬೈಕಂಪಾಡಿ ಕೈಗಾರಿಕಾ ಪ್ರದೇಶ : ಸಮಗ್ರ ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

 (ನ್ಯೂಸ್ ಕಡಬ) newskadaba.com, ಮಂಗಳೂರು, ನ.29.  ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಲ್ಲಿ ಆಗಾಗ್ಗೆ ನೆರೆ ಬರುವ ಕಾರಣ ಕೈಗಾರಿಕಾ ಘಟಕಗಳಿಗೆ ನಷ್ಟವಾಗುವ ದೃಷ್ಟಿಯಿಂದ ಆ ನೆರೆ ಪ್ರದೇಶಗಳ ಕುರಿತು ಸಮೀಕ್ಷೆ ನಡೆಸಬೇಕು, ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ನೀರು ಹರಿಯುವ ಚರಂಡಿಗಳನ್ನು ಮರುವಿನ್ಯಾಸಗೊಳಿಸುವ ಸೂಕ್ತ ಪ್ರಸ್ತಾವನೆ ತಯಾರಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಸೂಚಿಸಿದ್ದಾರೆ.


ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಾಲ್‍ನಲ್ಲಿ ನಡೆದ ಕೈಗಾರಿಕಾ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಮಳೆ ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಕೈಗಾರಿಕಾ ಘಟಕಗಳಿಗೆ ತೀವ್ರ ನಷ್ಟವಾಗಿರುವ ಬಗ್ಗೆ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖರಾಗಲು ಜಿಲ್ಲಾಧಿಕಾರಿಗಳು ಕೆಐಎಡಿಬಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೊಂಕಣ ರೈಲ್ವೇ ಕಾಮಗಾರಿಯಿಂದ ಬೈಕಂಪಾಡಿ ಸಮೀಪ ತೋಕೂರು ಗ್ರಾಮದ ಕೆಲ ಕುಟುಂಬಗಳಿಗೆ ಲ್ಯಾಂಡ್‍ಲಾಕ್ ಆಗಿರುವ ಕಾರಣ ಸಮಸ್ಯೆಯನ್ನು ಬಗೆಹರಿಸಲು ರೈಲ್ವೇ ಅಧಿಕಾರಿಗಳು ಮುಂದಿನ ಸಭೆಗೆ ಹಾಜರಾಗುವಂತೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಕೈಗಾರಿಕೆಗಳಿಗೆ ನಿವೇಶನ ಹಂಚಿಕೆ ನೀಡುವ ಸಂದರ್ಭಗಳಲ್ಲಿ ಇಂಡಸ್ಟ್ರೀಯಲ್ ಪರಿವರ್ತನೆ ಆಗಿರುವ ನಿವೇಶನಗಳನ್ನು ಮಾತ್ರ ನೀಡಬೇಕು. ಇಂಡಸ್ಟ್ರೀಯಲ್ ಕನ್ವವರ್ಷನ್ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂಬುವುದನ್ನು ಪರಿಶೀಲನೆ ನಡೆಸಿ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

Also Read  ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ


ಕೆ.ಐ.ಎ.ಡಿ.ಪಿ/ಕೆ.ಎಸ್.ಎಸ್.ಐ.ಡಿ.ಸಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಕೈಗಾರಿಕಾ ಸಂಘಗಳ ಬೇಡಿಕೆಯನ್ನು ಸಭೆಯಲ್ಲಿ ಚರ್ಚೆ ಮಾಡಲಾಯಿತು. ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಜಾಗ ಗುರುತಿಸಿ, ಅಂದಾಜು ಯೋಜನೆಗಳನ್ನು ಹಾಕಿ ನಂತರ ಅಂತಹ ಪ್ರದೇಶದಲ್ಲಿ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಐದು ಕೈಗಾರಿಕೆಗಳಿಗೆ ನಿವೇಶನ ಹಂಚಿಕೆ ನೀಡಲಾಯಿತು. ಸಭೆಯಲ್ಲಿ ಕೈಗಾರಿಕೆ ಇಲಾಖೆ ಜಂಟೀ ನಿರ್ದೇಶಕ ಗೋಕುಲದಾಸ್ ನಾಯಕ್, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಗೌರವ್ ಹೆಗ್ಡೆ ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Also Read  ಮೀನು ಪ್ರಿಯರಿಗೆ ಸಂತಸದ ಸುದ್ದಿ ➤ ನಾಳೆ ಕಡಬದಲ್ಲಿ ವಿಶೇಷ ದರ ಕಡಿತ ಮೀನು ಮಾರಾಟ

error: Content is protected !!
Scroll to Top