(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ, ನ.28. ಇತ್ತೀಚಿನ ದಿನಗಳಲ್ಲಿ ಅಪಾಯದ ಮಟ್ಟವನ್ನು ತಲುಪುತ್ತಿರುವ ಧೂಳಿನ ಕಣಗಳಿಂದ ಉಂಟಾಗುವ ಅಲರ್ಜಿಯು ಹೆಚ್ಚುತ್ತಿರುವ ವಾಹನಗಳ ಬಳಕೆ, ರಾಸಾಯನಿಕಗಳ ಬಳಕೆ, ಕಾರ್ಖಾನೆಗಳ ಹೊಗೆ ಹೀಗೆ ಹಲವು ಕಾರಣಗಳಿಂದಾಗಿ ವಾತಾವರಣದಲ್ಲಿ ಧೂಳು ಹೆಚ್ಚುತ್ತಿದೆ. ಮನೆಗಳಲ್ಲಿ ಸಹ ಜಿರಳೆಗಳು, ಸ್ಪೈಡರ್, ಮೋಲ್ಡ, ಯೀಸ್ಟ್ ನಂಥ ಫಂಗಸ್ ಗಳು, ಪ್ರಾಣಿ -ಪಕ್ಷಿಗಳ ಕೂದಲು ಸಹ ಅಪಾಯಕಾರಿ ಧೂಳನ್ನು ಉತ್ಪತ್ತಿಮಾಡುತ್ತದೆ. ಈ ಅಲರ್ಜಿಯಿಂದ ನಿರಂತವಾಗಿ ಕಾಡುವ ನೆಗಡಿ, ತ್ವಚೆಯ ಮೇಲೆ ಹೆಚ್ಚಾಗುವ ಕೆರೆತ, ಉಸಿರಾಟದ ಸಮಸ್ಯೆ, ಎದೆಯ ಬಿಗಿತ ಸೇರಿದಂತೆ ಹಲವು ಹೊಸ-ಹೊಸ ಸಮಸ್ಯೆಗಳು ಎದುರಾಗುತ್ತಿದೆ. ಈ ಕಾರಣದಿಂದ ಕೆಲವು ಮನೆಮದ್ದುಗಳು ಧೂಳಿನಿಂದ ಹರಡಬಹುದಾದ ಅಪಾಯಕಾರಿ ಸಮಸ್ಯೆಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಜೇನುತುಪ್ಪ
ಯಾವುದೇ ರೀತಿಯ ಕಲಬೆರಕೆ ಇಲ್ಲದ ನೈಸರ್ಗಿಕ ಜೇನುತುಪ್ಪವನ್ನು ನಿತ್ಯ ಎರಡು ಬಾರಿಯಂತೆ ಎರಡು ಚಮಚವನ್ನು ಸೇವಿಸಿ. ಜೇನುತುಪ್ಪದಲ್ಲಿ ಪಾಲೆನ್ (ಪುಷ್ಪಧೂಳಿ) ಎಂಬ ಕಣಗಳು ಇರುವುದರಿಂದ ಇದು ಧೂಳಿನಿಂದ ಉಂಟಾಗುವ ಅಲರ್ಜಿಯನ್ನು ತಪ್ಪಿಸುತ್ತದೆ.
ಅರಿಶಿನ
ಅರಿಶಿನ ರೋಗ ನಿರೋಧಕ ಗುಣ ಹಾಗೂ ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿರುವುದರಿಂದ ಇದು ಹಲವು ಕಾಯಿಲೆಗಳಿಗೆ ಒಳ್ಳೆಯ ಮನೆಮದ್ದಾಗಿದೆ. ಒಂದು ಲೋಟ ಹಾಲಿಗೆ ಅರಿಶಿನ, ಮೆಣಸು ಹಾಕಿ ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ, ತಣ್ಣಗಾದ ನಂತರ ಕುಡಿಯಿರಿ. ಇದನ್ನು ನಿತ್ಯ ಎರಡು ಬಾರಿ ಕುಡಿಯುವುದರಿಂದ ಅಲರ್ಜಿ ಬರದಂತೆ ಹಾ ಗೂ ಬಂದರೂ ಸೋಂಕು ಉಂಟಾಗದಂತೆ ತಡೆಯುತ್ತದೆ.
ಅಲೊವೆರಾ
ಅಲೋವೆರಾದಲ್ಲಿ ನೈಸರ್ಗಿಕ ರೋಗ ನಿರೋಧಕ ಹಾಗೂ ಉರಿಯೂತ ಶಮನ ಮಾಡುವ ಅಂಶವನ್ನು ಹೊಂದಿರುವುದರಿಂದ ಇದು ಅಲರ್ಜಿಗೆ ಅತ್ಯುಪಕಾರಿ ಮನೆಮದ್ದು. ನಿತ್ಯ ಎರಡು ಹೊತ್ತು ಕಾಲು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅಲರ್ಜಿ ಬರುವುದನ್ನು ತಡೆಗಟ್ಟುತ್ತದೆ ಅಲ್ಲದೆ, ಅಲರ್ಜಿ ಉಂಟಾದಾಗ ತ್ವಚೆ ಊದುವುದು ಅಥವಾ ನೋವನ್ನು ಸಹ ನಿವಾರಿಸುತ್ತದೆ.
ತುಪ್ಪ
ಅಲರ್ಜಿಯಿಂದಾಗಿ ನಿಮಗೆ ನಿರಂತರವಾಗಿ ಸೀನುವ ಸಮಸ್ಯೆ ಎದುರಾಗಿದ್ದರೆ ತುಪ್ಪ ಬಳಸಬಹುದು. ಕಾಲು ಚಮಚ ತುಪ್ಪವನ್ನು ಹಾಗೇ ಅಥವಾ ರುಚಿಗಾಗಿ ಬೆಲ್ಲವನ್ನು ಸೇರಿಸಿ ತಿನ್ನುವ ಮೂಲಕ ಸೀನುವ ಸಮಸ್ಯೆ ತತ್ ಕ್ಷಣವೇ ನಿವಾರಣೆಯಾಗುತ್ತದೆ. ತುಪ್ಪವು ನಿಮ್ಮ ಮೂಗನ್ನು ಬೆಚ್ಚಗಿರುತ್ತದೆ ಹಾಗೂ ಸತತ ಸೀನನ್ನು ತಡೆಯುತ್ತದೆ. ತುಪ್ಪವನ್ನು ಧೂಳಿನ ಅಲರ್ಜಿಗೆ ಅತ್ಯಂತ ತುರ್ತು ಶಮನಕಾರಿ ಮನೆಮದ್ದಾಗಿ ಹೆಚ್ಚು ಬಳಸುತ್ತಾರೆ.