✍ ಭಾಸ್ಕರ ಜೋಗಿಬೆಟ್ಟು
(ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಹಿಂದಿನ ಜನ್ಮದ ಪಾಪದ ಫಲವೊ ಅಥವಾ ನನ್ನ ಹಣೆ ಬರಹವೊ ಗೊತ್ತಿಲ್ಲ, ಅಮ್ಮನ ಹೊಟ್ಟೆಯಿಂದ ನಾಲ್ವರ ಜೊತೆ ನಾನು ಹೆಣ್ಣಾಗಿ ಹುಟ್ಟಿದೆ. ಬೆಳೆಯುತ್ತ ಅಮ್ಮನ ಹೊಟ್ಟೆಯಲ್ಲಿ ಒಬ್ಬರನ್ನೊಬ್ಬರು ಮೈ ಸ್ಪರ್ಷಿಸುತ್ತ, ಕೈ ಕಾಲು ಅಲ್ಲಾಡಿಸುತ್ತ ಆಟ ಆಡುತ್ತಿದ್ದೇವು. ದಿನಗಳು ಕಳೆದು ತಿಂಗಳು ಬರುವಷ್ಟರಲ್ಲಿ ಹೊರ ಜಗತ್ತಿನಲ್ಲಿ ಹೊಸತನದಿಂದ ಬದುಕುವ ಆಸೆಯಿತ್ತು. ಅಮ್ಮನ ಹೊಟ್ಟೆಯಿಂದ ಹೊರ ಬಂದೆವು. ಹುಟ್ಟಿದ ನಾಲ್ವರಲ್ಲಿ ನಾನೊಬ್ಬಳು ಹೆಣ್ಣು. ಇಲ್ಲಿಂದ ಆರಂಭವಾಯಿತು ನಮ್ಮ ನಿಜ ಜೀವನದ ಚರಿತ್ರೆ.
ನಾನು ಹೆಣ್ಣಾಗಿ ಹುಟ್ಟಿದ್ದು ಅಮ್ಮನಿಗೆ ಭಾರವೆನಿಸಲಿಲ್ಲ… ಅಮ್ಮ ನಗು ನಗುತ್ತಾ ಖುಷಿಯಾಗಿದ್ದಳು. ಬದಲಾಗಿ ಭಾರವಾಗಿದ್ದು ಮನೆಯ ಯಜಮಾನನಿಗೆ. ನಾನು ಹುಟ್ಟಿದ ತಕ್ಷಣವೇ ಅವನ ಕಣ್ಣು ಕೆಂಪಗಾಯಿತು. ಹುಟ್ಟಿ ಕಣ್ಣು ಬಿಡುವ ಮೊದಲೆ ಊಟ ನೀರಿಲ್ಲದ ಕಡೆ ಗೋಣಿ ಚೀಲದಲ್ಲಿ ಹಾಕಿ ಬಿಟ್ಟು ಹೋದ. ಅಮ್ಮನ ಮೊಲೆ ಹಾಲು ಕುಡಿದು ಒಡ ಹುಟ್ಟಿದವರ ಜೊತೆ ಕುಣಿದು ಕುಪ್ಪಳಿಸ ಬೇಕಾದ ನಾನು ಬೀದಿ ಪಾಲಾದೆ. ನಾನು ಹೆಣ್ಣಾಗಿ ಹುಟ್ಟಿದ್ದು ತಪ್ಪೆ? ಅದೆಂತಹ ಕೀಲರಿಮೆ ? ಅಷ್ಟೊಂದು ತಾತ್ಸರವೆ ?
ಅಯ್ಯೊ ….ಮಾನವರೆ ನೀವು ಬುದ್ದಿ ಜೀವಿಗಳು . ಪ್ರತಿಯೊಂದು ವಿಷಯಗಳನ್ನು ಅಳೆದು ತೂಗಿ ಮನದಟ್ಟು ಮಾಡಿಕೊಳ್ಳವವರು. ಮಾನವೀಯತೆ, ಸೌಜನ್ಯ, ಕರುಣೆ ಉಳ್ಳವರು. ಆದರೆ……. ಈಗ ಎಲ್ಲಿ ಹೋಯಿತು ನಿಮ್ಮ ಮಾನವೀಯ ಮೌಲ್ಯಗಳು ? ನಿಮಗೆ ಪಾಪ ಪ್ರಜ್ಞೆ ಇಲ್ಲವೆ? ಬಾಯಲ್ಲಿ, ಪುಸ್ತಕದಲ್ಲಿ ಅಕ್ಷರಗಳ ರೂಪದಲ್ಲಿ ಇದ್ದರೆ ಸಾಕೆ ? ಎಂದು ಜಡಿ ಮಳೆಗೆ ಒದ್ದೆಯಾಗಿ ಸಾರ್ವಜನಿಕ ಬಸ್ ತಂಗುದಾಣದ ಒಂದು ಬದಿಯ ಕಸದ ರಾಶಿಯಲ್ಲಿ ಗೋಡೆಗೆ ಒರಗಿ ಹೆಣ್ಣು ಮರಿ ನಾಯಿಯೊಂದು ಅಮ್ಮನ ನೆನದು ಗಳ ಗಳನೆ ಅಳುತ್ತಾ ತನ್ನಷ್ಟಕ್ಕೆ ತಾನು ಚಿಂತಿಸುತ್ತಿತ್ತು.
ಹೌದು ಸ್ನೇಹಿತರೆ.. ನಾವು ಅಲ್ಲಲ್ಲಿ ಯಾರೊ ಬಿಟ್ಟು ಹೋದ ನಾಯಿ ಮರಿಗಳ ಕೂಗು ಕೇಳುತ್ತೇವೆ. ಕೆಲವು ನಾಯಿ ಮರಿಗಳು ಊಟ ನೀರಿಲ್ಲದೆ ಕಂಗಳಾಗಿ ನಮ್ಮ ಬೆನ್ನ ಹಿಂದೆಯೆ ಅಳುತ್ತಾ ಬರುತ್ತವೆ. ಇನ್ನು ಕೆಲವು ರಸ್ತೆ ದಾಟುವಾಗ ಯಾವುದೊ ವಾಹನದ ಅಡಿಗೆ ಸಿಲುಕಿ ಬಾರದ ಲೋಕಕ್ಕೆ ತೆರಳುತ್ತವೆ. ಅಯ್ಯೋ …ಪಾಪ ಪ್ರತಿಯೊಂದು ಜೀವಿಗೂ ಜಗತ್ತಿನಲ್ಲಿ ಬದುಕುವ ಹಕ್ಕು ಇದೆ. ಇಷ್ಟೊಂದು ಹೀನಾಯ ಪರಿಸ್ಥಿತಿಯಲ್ಲಿ ಬದುಕ ಬಾರದು. ಅದು ಕೂಡ ಒಂದು ಹೆಣ್ಣು ಎಂಬ ಕಾರಣಕ್ಕಾಗಿ…!!
ಇನ್ನೊಂದು ಜೀವಿಯ ಬದುಕು , ಸಂತೋಷ, ನೆಮ್ಮದಿಯನ್ನು ಕಸಿಯದಿರೋಣ ಮಾನವರೆ….