(ನ್ಯೂಸ್ ಕಡಬ) newskadaba.com ಮೈಸೂರು, ನ.18. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ಯುವಕನೋರ್ವ ಚೂರಿಯಿಂದ ಇರಿದ ಘಟನೆ ಭಾನುವಾರ ತಡರಾತ್ರಿ ಮೈಸೂರಿನಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡ ತನ್ವೀರ್ ಸೇಠ್ ರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಧಿತ ಆರೋಪಿಯನ್ನು ಮೈಸೂರಿನ ಗೌಸಿಯಾನಗರದ ನಿವಾಸಿ ಫರ್ಹಾನ್ ಎಂದು ಗುರುತಿಸಲಾಗಿದೆ. ಮೈಸೂರಿನ ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ಸಂಬಂಧಿಕರೋರ್ವರ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್ ಭಾಗವಹಿಸಿದ್ದ ವೇಳೆ ಯುವಕನೋರ್ವ ಏಕಾಏಕಿ ಅವರ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದು, ಈ ವೇಳೆ ಬೆನ್ನಟ್ಟಿದ್ದ ಸ್ಥಳೀಯರು ಆರೋಪಿಯನ್ನು ಹಿಡಿದು ಎನ್.ಆರ್.ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.