(ನ್ಯೂಸ್ ಕಡಬ) newskadaba.com ಕಡಬ, ನ.14 ಸರಕಾರದ ಅನುಮತಿ ಇಲ್ಲದೆ ಕೆಸಿಸಿ ಆರೋಗ್ಯ ಕಾರ್ಡ್ ಎನ್ನುವ ಹೆಸರಿನಲ್ಲಿ ನ.12ರಂದು ಕಡಬ ಗ್ರಾ.ಪಂ.ಕಚೇರಿಯಲ್ಲಿ ಕುಳಿತು ಹಣ ಸಂಗ್ರಹಿಸಿ ಆರೋಗ್ಯ ಕಾರ್ಡ್ ವಿತರಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರ ದೂರಿನಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ ಘಟನೆಗೆ ಸಂಬಂಧಿಸಿ ಕೆಸಿಸಿ ಆರೋಗ್ಯ ಕಾರ್ಡ್‍ನ ಗೊಂದಲ ನಿವಾರಣೆಗೆ ಟ್ರಸ್ಟ್‍ನ ಮುಖ್ಯಸ್ಥರು ಕಡಬ ಠಾಣೆಗೆ ಆಗಮಿಸಿ ಮಾತುಕತೆ ನಡೆಸಿ 15 ದಿನಗಳಲ್ಲಿ ಕಾರ್ಡ್‍ನ ಬಗ್ಗೆ ಮಾಹಿತಿ ಮತ್ತು ಪ್ರಯೋಜನ ಪಡೆದುಕೊಂಡ ಫಲಾನುಭವಿಗಳ ವಿವರಣೆ ನೀಡುವುದಾಗಿ ಹೇಳಿಕೆ ನೀಡಿ ತೆರಳಿದ ಘಟನೆ ನ.13ರಂದು ನಡೆದಿದೆ.
ಮಂಗಳೂರಿನ ದೇರಳಕಟ್ಟೆಯ ಕಾಯರ್‍ಮಾರ್ ಆಸ್ಪತ್ರೆ ಎನ್ನುವ ಹೆಸರಿನಲ್ಲಿ ಕರಪತ್ರ ಮುದ್ರಿಸಿ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡು ಕಡಬ ಗ್ರಾ.ಪಂ. ಕಚೇರಿಯಲ್ಲಿ ಕುಳಿತು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಆರೋಗ್ಯ ಕಾರ್ಡ್ ನೀಡುತ್ತಿರುವ ಬಗ್ಗೆ ಸುದ್ದಿ ತಿಳಿದ ರೈತ ಸಂಘದ ಮುಖಂಡ ವಿಕ್ಟರ್ ಮಾರ್ಟಿಸ್ ಅವರು ಆರೋಗ್ಯ ಕಾರ್ಡ್ ನೀಡುತ್ತಿದ್ದ ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಕಾನೂನು ಬಾಹಿರವಾಗಿ ಜನರಿಂದ ಹಣ ಸಂಗ್ರಹಿಸಿ ವಂಚಿಸಲಾಗುತ್ತಿದೆ. ಆರೋಗ್ಯ ಕಾರ್ಡ್ ನೀಡುತ್ತಿರುವ ಸಂಸ್ಥೆಯು ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲ. ಅಂತಹ ಸಂಸ್ಥೆಗಳಿಗೆ ಗ್ರಾ.ಪಂ.ಕಚೇರಿಯೊಳಗೆ ಈ ವ್ಯವಹಾರ ಮಾಡಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದರು ಅದರಂತೆ ಪೊಲೀಸರು ಆರೋಗ್ಯ ಕಾರ್ಡ್ ನೀಡುತ್ತಿದ್ದ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿ ನ.13ರಂದು ಸರಕಾರದ ಅನುಮತಿ ಪಡೆದುಕೊಂಡಿರುವ ಕುರಿತು ಅಧಿಕೃತ ದಾಖಲೆಪತ್ರಗಳನ್ನು ಠಾಣೆಗೆ ಹಾಜರುಪಡಿಸುವಂತೆ ತಿಳಿಸಿ ಬಿಡುಗಡೆಗೊಳಿಸಿದ್ದರು.
ನ.13ರಂದು ಕಡಬ ಠಾಣೆಗೆ ಆಗಮಿಸಿದ ಕೆಸಿಸಿ ಕಾರ್ಡ್‍ನ ಪ್ರತಿನಿಧಿಗಳು ಆಗಮಿಸಿ ಕೆಸಿಸಿ ಕಾರ್ಡ್‍ನ ಬಗ್ಗೆ ಸಮಜಾಯಿಸಿಕೆ ನೀಡಲು ಮುಂದಾದರು ಈ ಸಂದರ್ಭದಲ್ಲಿ ದೂರುದಾರ ರೈತ ಸಂಘದ ಮುಖ್ಯಸ್ಥ ವಿಕ್ಟರ್ ಮಾರ್ಟಿಸ್ ಅವರು ಪ್ರಶ್ನಿಸಿ ನಿಮ್ಮ ಕೆಸಿಸಿ ಕಾರ್ಡನ್ನು ನಾನು 2017ರಲ್ಲಿ ಮಾಡಿಸಿಕೊಂಡಿದ್ದು ಸ್ವತಃ ನಾನೇ ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾದಗ ನಿಮ್ಮ ಕಾರ್ಡ್ ಪ್ರಯೋಜನ ಬರಲಿಲ್ಲ, ಆದುದರಿಂದ ನಾನು ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದ್ದೆ ಅಲ್ಲದೆ ನಿನ್ನೆ ಕಡಬದಲ್ಲಿ ಕಾರ್ಡ್ ಕೊಡುವ ವಿಚಾರ ತಿಳಿದು ಇನ್ಯಾರಿಗೂ ನನ್ನ ಹಾಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ನಾನು ಆಕ್ಷೇಪಿಸಿದ್ದೆ, ಕಳೆದ ಬಾರಿ ನೀವು ಮಾಡಿದ ಸುಮಾರು 300ರಷ್ಟು ಕಾರ್ಡ್ ಫಲಾನುಭವಿಗಳಿಗೆ ದೊರೆತಿಲ್ಲ, ಆದುದರಿಂದ ನೀವು ದಯವಿಟ್ಟು ಈ ಕಾರ್ಡ್ ಮಾಡಿ ಜನರಿಗೆ ಕೊಡಬೇಡಿ, 450 ಕೊಟ್ಟು ನಾನು ಕಾರ್ಡ್ ಮಾಡಿದ್ದೆನೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಕೆಸಿಸಿ ಸಂಸ್ಥೆಯ ವಾಸಿಪ್ ಅವರು ನಾವು ಕಳೆದ ಬಾರಿ 100 ರೂಪಾಯಿಯಂತೆ ಕಾರ್ಡ್‍ಗೆ ಹಣ ಪಡೆದುಕೊಂಡಿರುವುದು, ಅಲ್ಲದೆ ಕಡಬದಲ್ಲಿ ಕದಂಬ ಚಾರಿಟೇಬಲ್ ಟ್ರಸ್ಟ್‍ನ ಸಹಯೋಗದಲ್ಲಿ ಮಾಡಿದ್ದು ಅವರು ಕಾರ್ಡ್ ವಿತರಣೆ ಮಾಡಬೇಕಿತ್ತು, ಒಂದು ವೇಳೆ ಒಂದು ಕಾರ್ಡಿಗೆ 450ರಂತೆ ಹಣ ಸಂಗ್ರಹ ಮಾಡಿದ್ದರೆ ಅಂತವರ ವಿರುದ್ದ ನಾವು ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ, ನಮಗೆ ಎಲ್ಲ ಆಸ್ಪತ್ರೆಗಳ ಜತೆ ಮಾಡಿಕೊಂಡ ಒಪ್ಪಂದದ ದಾಖಲೆ ಪತ್ರಗಳು ಇದೆ ಎಂದು ಕೆಲವು ಆಸ್ಪತ್ರೆಗಳ ಲೆಟರ್ ಹೆಡ್ ಪತ್ರಗಳನ್ನು ತೋರಿಸಿದರು ಮತ್ತು ನಮ್ಮ ಕೆಸಿಸಿ ಕಾರ್ಡಿನಿಂದ ಪ್ರಯೋಜನ ಪಡೆದುಕೊಂಡ ಫಲಾನುಭವಿಗಳ ಮಾಹಿತಿಯನ್ನು ತಿಳಿಸಲು 15 ದಿನಗಳ ಕಾಲಾವಕಾಶ ಬೇಕು, ನಾವು ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಟ್ರಸ್ಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದೆವೆ, ಕಡಬದಲ್ಲಿ ಫಲಾನುಭವಿಗಳಿಗೆ ಕೂಡಲೇ ಹೊಸ ಕಾರ್ಡನ್ನು ವಿತರಿಸುತ್ತೇವೆ ಎಂದು ಹೇಳಿದರು. ಈ ಬಗ್ಗೆ ಠಾಣೆಯ ಎ.ಎಸ್.ಐ. ಚಂದ್ರಶೇಖರ್ ಹಾಗೂ ರವಿಯವರು ಮಾತನಾಡಿ, ನೀವು ನಿಮ್ಮ ಆಸ್ಪತ್ರೆಗಳಲ್ಲಿ ಮಾತ್ರ ಇಂತಹ ಸೌಲಭ್ಯ ನೀಡಿ ಎಲ್ಲ ಆಸ್ಪತ್ರೆಗಳಿಗೆ ನೀಡಲು ಹೋಗಬೇಕಾದರೆ ಸರಕಾರದ ಅನುಮತಿ ಮೊದಲಾದ ದಾಖಲೆ ಸರಿಯಾಗಿ ಬೇಕು, ನೀವು 15 ದಿನದೊಳಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಸಿಸಿ ಸಂಸ್ಥೆಯ ಅಬ್ದುಲ್ ನಾಸಿರ್, ನಿಸಾರ್, ವಾಸಿಪ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ರೈತ ಮುಖಂಡ ವಿಕ್ಟರ್ ಅವರು ನಾನು ಇವರಿಂದ ಮೋಸ ಹೋಗಿದ್ದೆನೆ, ನನ್ನ ಹೋರಾಟ ನಿಲ್ಲುವುದಿಲ್ಲ, ಕಡಬ ಗ್ರಾ.ಪಂ.ನಲ್ಲಿ ಅನಧಿಕೃತವಾಗಿ ನೊಂದಾಣಿಗೆ ಅವಕಾಶ ನೀಡಿರುವ ಬಗ್ಗೆ ಮುಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು.