ಕಡಬ, ನ. 13. ಸರಕಾರದ ಅನುಮತಿ ಇಲ್ಲದೆ ‘ಕೆಸಿಸಿ ಆರೋಗ್ಯ ಕಾರ್ಡ್’ ಎನ್ನುವ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದ ಸಾರ್ವಜನಿಕರು ಕಡಬ ಗ್ರಾ.ಪಂ. ಸಭಾಂಗಣದೊಳಗೆ ಪಂಚಾಯತ್‌ನ ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಡ್ ನೋಂದಣಿ ಮಾಡುತ್ತಿದ್ದ ಪ್ರತಿನಿಧಿಯನ್ನು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಮಂಗಳವಾರದಂದು ಕಡಬದಲ್ಲಿ ನಡೆದಿದೆ.
ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡು ಕಡಬ ಗ್ರಾ.ಪಂ. ಕಚೇರಿಯಲ್ಲಿ ಆರೋಗ್ಯ ಕಾರ್ಡ್ ಮಾಡಿಕೊಡುವ ಬಗ್ಗೆ ಹಣ ಸಂಗ್ರಹಿಸಲಾಗುತ್ತಿತ್ತು. ಇದೇ ವೇಳೆ ಆಗಮಿಸಿದ ರೈತ ಸಂಘದ ಮುಖಂಡ ವಿಕ್ಟರ್ ಮಾರ್ಟಿಸ್ ಅವರು ಕಾರ್ಡ್ ನೋಂದಣಿ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡು, ಪಂಚಾಯತ್‌ನವರ ಅನುಮತಿ ಇಲ್ಲದೆ ಪಂಚಾಯತ್ ವಠಾರದಲ್ಲಿ ಈ ರೀತಿ ಜನರಿಂದ ದುಡ್ಡು ಸಂಗ್ರಹಿಸಿ ವಂಚಿಸುತ್ತಿರುವುದು ಕಾನೂನು ಬಾಹಿರವಾಗಿದ್ದು, ಪಂಚಾಯತ್‌ನಲ್ಲಿ ಈ ರೀತಿಯ ಕಾರ್ಡ್ ವಿತರಿಸುವಾಗ ಜನರು ಇದೊಂದು ಸರಕಾರಿ ಯೋಜನೆ ಇರಬಹುದೆಂದು ತಪ್ಪು ಗ್ರಹಿಕೆಯಲ್ಲಿ ಕಾರ್ಡ್ ಮಾಡಿಸಿಕೊಂಡಿದ್ದಾರೆ. 2 ವರ್ಷಗಳ ಹಿಂದೆ ನಾನು ಆರೋಗ್ಯ ಕಾರ್ಡ್ ಮಾಡಿಸಿಕೊಂಡಿದ್ದು ಬಳಿಕ ಅವರು ಸೂಚಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅಲ್ಲಿ ಆ ಸೌಲಭ್ಯ ಸಿಕ್ಕಿರಲಿಲ್ಲ, ಬಳಿಕ ಈ ಬಗ್ಗೆ ನಾನು ಗ್ರಾಮ ಸಭೆ, ಜನಸಂಪರ್ಕ ಸಭೆಗಳಲ್ಲಿ ಪ್ರಸ್ತಾಪಿಸಿದರೂ ನನಗೆ ನ್ಯಾಯ ಸಿಕ್ಕಿಲ್ಲ. ಜನರಿಂದ ಹಣ ಸಂಗ್ರಹಿಸಿ ಜನರಿಗೆ ಕಾರ್ಡ್ ತಲುಪಿಸದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ, ಇನ್ನು ಜನರಿಗೆ ವಂಚನೆ ಮಾಡಲು ಬಿಡುವುದಿಲ್ಲ ಎಂದು ಹೇಳಿ ಇವರ ವಿರುದ್ಧ ಪೊಲೀಸ್ ದೂರು ನೀಡಿದ್ದು ಪೋಲಿಸರು ಕಾರ್ಡ್ ನೊಂದಾಣಿ ಮಾಡುವ ಪ್ರತಿನಿಧಿಯನ್ನು ವಶಕ್ಕೆ ಪಡೆದುಕೊಂಡರು.
ಕೆ.ಸಿ.ಸಿ ಆರೋಗ್ಯ ಕಾರ್ಡ್‌ಗೆ ಸರಕಾರದಿಂದ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ವಿಚಾರಿಸಿದಾಗ ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನಮ್ಮಲ್ಲಿ ಆಯುಷ್ಮಾನ್ ಭಾರತ ಮಾತ್ರ ಕೆಸಿಸಿ ಕಾರ್ಡ್ ಬಗ್ಗೆ ಗೊತ್ತೇ ಇಲ್ಲ ಎಂದಿದ್ದಾರೆ. ಆಸ್ಪತ್ರೆಗೆಗೆ ರೋಗಿಗಳನ್ನು ಸಪ್ಲಾಯ್ ಮಾಡುವ ಯೋಜನೆ
ಕೆಲವು ಆಸ್ಪತ್ರೆಗಳು ಕೆಸಿಸಿ ಕಾರ್ಡ್‌ಗಳಿಗೆ ರಿಯಾಯಿತಿ ನೀಡುವುದಾಗಿ ಹೇಳಿಕೊಂಡಿದೆ ಆದರೆ ಇದೊಂದು ಬೋಗಸ್ ಯೋಜನೆ. ಇದರಿಂದ ಜನರನ್ನು ವಂಚಿಸುತ್ತಿರುವುದಾಗಿದೆ. ಕೆಸಿಸಿ ಕಾರ್ಡ್ ಇದ್ದರೆ ರೋಗಿಯ ಚಿಕಿತ್ಸಾ ವೆಚ್ಚವು ಜಾಸ್ತಿ ಮಾಡಿ ಬಳಿಕ ರಿಯಾಯಿತಿ ಕೊಡುವ ಕ್ರಮ ಆಸ್ಪತ್ರೆಗಳಲ್ಲಿ ನಡೆದು ಬರುತ್ತಿರುವುದು ಸರ್ವೆ ಸಾಮಾನ್ಯ. ಆದುದರಿಂದ ಸರಕಾರದಿಂದ ಮಾನ್ಯತೆ ಪಡೆಯದ ಇಂತಹ ವಂಚನಾ ಜಾಲಗಳಿಗೆ ಜನರು ಬಲಿಯಾಗಬಾರದೆಂದು ವಿಕ್ಟರ್ ಮಾರ್ಟಿಸ್ ಹೇಳಿದರು.