(ನ್ಯೂಸ್ ಕಡಬ) newskadaba.com ಉಡುಪಿ, ಆ.19. ಉಡುಪಿ ಕೃಷ್ಣಮಠದ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹರ್ನಿಯಾದ ಶಸ್ತ್ರಚಿಕಿತ್ಸೆ ನಡೆಯಲಿದೆ.
ಪೇಜಾವರ ಶ್ರೀಗಳು ಪ್ರಸ್ತುತ 2016 ರ ಜ.18 ರಿಂದ 2 ವರ್ಷಗಳ ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರ ನಡೆಸುತ್ತಿದ್ದು, ಸಂಪ್ರದಾಯದಂತೆ 2 ವರ್ಷಗಳ ಕಾಲ ಪರ್ಯಾಯ ಶ್ರೀಗಳು ಕೃಷ್ಣ ಮಠವನ್ನು ಬಿಟ್ಟು ಹೊರಗೆ ಹೋಗುವಂತಿಲ್ಲ. ಆದರೆ ಇದು ತೀವ್ರ ಆರೋಗ್ಯದ ಸಮಸ್ಯೆಯಾದ್ದರಿಂದ ಪೇಜಾವರ ಶ್ರೀಗಳು ಆಸ್ಪತ್ರೆಗೆ ಹೋಗಲೇಬೇಕಾಗಿದೆ. ಕಳೆದ ಕೆಲವು ಸಮಯದಿಂದ ಪೇಜಾವರ ಶ್ರೀಗಳು ಈ ಹರ್ನಿಯಾದ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ ಎಂದಿರುವುದರಿಂದ ಭಾನುವಾರ ಶ್ರೀಗಳು ಕೃಷ್ಣನಿಗೆ ಮುಂಜಾನೆಯ ಮಹಾಪೂಜೆಯನ್ನು ನೆರವೇರಿಸಿ ಕೆಎಂಸಿಗೆ ದಾಖಲಾಗಲಿದ್ದಾರೆ. ನಂತರ ಮಧ್ಯಾಹ್ನದೊಳಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಸೋಮವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಠಕ್ಕೆ ಬರುವ ಸಾಧ್ಯತೆಗಳಿವೆ.
ಪೇಜಾವರ ಶ್ರೀಗಳಿಗೆ ಪರ್ಯಾಯ ಪೂಜೆಯಲ್ಲಿ ಅವರ ಪಟ್ಟದ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಈಗಾಗಲೇ ಸಹಾಯ ಮಾಡುತ್ತಿರುವುದರಿಂದ, ಗುರುಗಳಿಲ್ಲದಿದ್ದರೂ ಕೃಷ್ಣನಿಗೆ ಪೂಜೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.