(ನ್ಯೂಸ್ ಕಡಬ) newskadaba.com, ಉಡುಪಿ, ಅ.31. ಕರಾವಳಿಯಲ್ಲಿ ಕ್ಯಾರ್ ಚಂಡಮಾರುತದ ಬೆನ್ನಲ್ಲೇ “ಮಹಾ” ಚಂಡಮಾರುತ ಅಪ್ಪಳಿಸುವ ಸೂಚನೆ ದೊರೆತಿದೆ. ವಾರದ ಹಿಂದಷ್ಟೇ ‘ಕ್ಯಾರ್’ ಚಂಡಮಾರುತ ಕರಾವಳಿ ಜನರನ್ನು ಭಯಭೀತಿತರನ್ನಾಗಿಸಿದೆ.ಇದೀಗ ಮುಂದಿನ 24ಗಂಟೆಗಳಲ್ಲಿ ಮಹಾ ಚಂಡಮಾರುತ ಅಪ್ಪಳಿಸಲಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಮಹಾ ಚಂಡಮಾರುತದ ಕಾರಣದಿಂದ ನವೆಂಬರ್ 4ರವರೆಗೂ ಮೀನುಗಾರಿಕೆಗೆ ತೆರಳದಂತೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಕೋಸ್ಟ್ ಗಾರ್ಡ್ ಆಪರೇಟಿಂಗ್ ಕೇಂದ್ರದಿಂದ ಸೂಚನೆ ದೊರೆತಿದೆ. ಈ ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಸಮುದ್ರದಲ್ಲಿ ಭಾರೀ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. 15 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಕರಾವಳಿ ಕಾವಲು ಪೊಲೀಸರು ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಲಕ್ಷದ್ವೀಪ ಬಳಿ ವಾಯುಭಾರ ಕುಸಿತ ಹಿನ್ನೆಲೆ ಕರಾವಳಿ ತೀರಕ್ಕೆ ಮಹಾ ಚಂಡಮಾರುತ ಅಪ್ಪಳಿಸಲಿದ್ದು, ಇದರಿಂದಾಗಿ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕೇರಳ, ಕರ್ನಾಟಕದ ಕೇಂದ್ರ ಪೂರ್ವ ಅರಬ್ಬಿ ಸಮುದ್ರದಲ್ಲಿ ಮಹಾ ಚಂಡಮಾರುತ ಕಾಣಿಸಿಕೊಂಡಿದೆ. ಪಶ್ಚಿಮ ಕೇಂದ್ರ, ಉತ್ತರ ಪಶ್ಚಿಮ ಅರಬ್ಬಿ ಸಮುದ್ರದಲ್ಲೂ ಕ್ಯಾರ್ ಚಂಡಮಾರುತದ ಪ್ರಭಾವ ಮುಂದುವರೆದಿದೆ.