(ನ್ಯೂಸ್ ಕಡಬ) newskadaba.com ಕುಂದಾಪುರ, ಅ.27. ಹೆಲ್ಮೆಟ್ ಧರಿಸದೆ ಇದ್ದುದಕ್ಕೆ ಬೈಕನ್ನು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದಿದ್ದಾಗ ಒವರ್‌ಟೇಕ್ ಮಾಡಿ ಅಡ್ಡಗಟ್ಟಿದ ವೇಳೆ ಬೈಕ್ ರಸ್ತೆಗುರುಳಿ ಬಿದ್ದು ಸವಾರ ಹಾಗೂ ತಡೆಯಲು ಹೋದ ಪೊಲೀಸ್‌ಗೆ ಸಿಬ್ಬಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಎಂಬಲ್ಲಿ ಶನಿವಾರದಂದು ನಡೆದಿದೆ.
ಗಾಯಾಳು ಬೈಕ್ ಸವಾರನನ್ನು ಕುಂದಾಪುರದ ಕೊರವಡಿ ನಿವಾಸಿ ಉಲ್ಲಾಸ್(27) ಎಂದು ಗುರುತಿಸಲಾಗಿದ್ದು, ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಶಂಕರನಾರಾಯಣ ಠಾಣೆಯ ಎಎಸೈ ಪ್ರಭಾಕರ ಎಂದು ತಿಳಿದು ಬಂದಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರದಂದು ರಾಘವೇಂದ್ರ ಮಠದ ಮುಂಭಾಗದಲ್ಲಿ ಹೈವೇ ಪೆಟ್ರೋಲ್ ವಾಹನದ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೇ ಆಗಮಿಸಿದ ಉಲ್ಲಾಸ್‌ನನ್ನು ಬೈಕ್ ನಿಲ್ಲಿಸುವಂತೆ ಸೂಚಿಸಿದರಾದರೂ ಆತ ನಿಲ್ಲಿಸದೇ ಇದ್ದುದರಿಂದ ಎಎಸೈ ಪ್ರಭಾಕರ ಬೈಕ್‌ನ ಹ್ಯಾಂಡಲ್ ಹಿಡಿದು ಎಳೆದಿದ್ದಾರೆ ಎನ್ನಲಾಗಿದೆ.
ಆಗ ನಿಯಂತ್ರಣ ಕಳೆದುಕೊಂಡ ಬೈಕ್ ರಸ್ತೆಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಉಲ್ಲಾಸ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಆಕ್ರೋಶಗೊಂಡ ಸ್ಥಳೀಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಉಡುಪಿ ಡಿವೈಎಸ್ಪಿ ಜೈಶಂಕರ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು.