(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.26. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭೀಕರ ಗಾಳಿ ಮಳೆಗೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಲಂಪ್ಪಾಡಿ ಪಳಿಕೆ ಎಂಬಲ್ಲಿ ವಾಸವಿರುವ ಚೋಮು ಎಂಬ ಮಹಿಳೆಯ ಮನೆಯು ಸಂಪೂರ್ಣವಾಗಿ ನಾಶವಾಗಿದ್ದು, ಬಡ ಮಹಿಳೆಯ ಬದುಕಿನಲ್ಲಿ ಅತಂತ್ರ ಸ್ಥಿತಿ ಎದುರಾಗಿದೆ.
ಪಂಚಾಯತ್ ವತಿಯಿಂದ ಈ ಹಿಂದೆ ನೀಡಿದ್ದ ಮನೆಯ ಕೆಲಸವೂ ಅರ್ಧದಲ್ಲೇ ಬಾಕಿಯಾಗಿ ಇದೀಗ ಇವರು ವಾಸಕ್ಕೆ ಮನೆ ಇಲ್ಲದೇ ಕಂಗಾಲಾಗಿದ್ದಾರೆ. ಸಾಯಂಕಾಲ ಬಂದ ಭೀಕರ ಗಾಳಿಗೆ ಇವರು ವಾಸವಿದ್ದ ಮನೆಯ ಮೇಲ್ಛಾವಣಿ ನೆಲಸಮವಾಗಿದೆ. ಈ ಸಮಯದಲ್ಲಿ ಮನೆಯ ಒಳಗಡೆ ಇದ್ದ ಮಕ್ಕಳು ಸೇರಿದಂತೆ ನಾಲ್ವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಸ್ಥಳಕಾಗಮಿಸಿದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಭಾಸ್ಕರಗೌಡ ಇಚ್ಲಂಪ್ಪಾಡಿಯವರು ಪಂಚಾಯತ್ ಸೇರಿದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ. ಇಬ್ರಾಹಿಂ ಹಾಗೂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ಸಮಯದಲ್ಲಿ ಅನಿಲ್ ಕುಮಾರ್ ಉಮೇಸಾಗು, ಡೇವಿಡ್ ಇಚ್ಲಂಪ್ಪಾಡಿ ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.