(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.25. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದಕ್ಕೆ 4.78 ಲಕ್ಷ ದಂಡ ವಿಧಿಸಿರುವ ಹರಿಹರದ ಹಿರಿಯ ಸಿವಿಲ್ ನ್ಯಾಯಾಲಯವು ಬಸ್‌ನ್ನು ಜಪ್ತಿ ಮಾಡುವಂತೆ ಅದೇಶಿಸಿದ ಘಟನೆ ಬುಧವಾರದಂದು ನಡೆದಿದೆ.
ಕೆಎಸ್ಸಾರ್ಟಿಸಿ ವಾಯುವ್ಯ ವಿಭಾಗದ ರಾಣೆಬೆನ್ನೂರು ಘಟಕಕ್ಕೆ ಸೇರಿದ ಬಸ್ಸು ಹರಿಹರದಲ್ಲಿ 2015 ರಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಘಟನೆಯಲ್ಲಿ ಕುಮಾರಪಟ್ಟಣಂ ನಿವಾಸಿ ಫಕೀರಪ್ಪ ಮಾಳಿ ಎಂಬವರು ಗಾಯಗೊಂಡ ಪರಿಣಾಮ ಪರಿಹಾರಕ್ಕಾಗಿ ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಹರಿಹರ ಹಿರಿಯ ಸಿವಿಲ್ ನ್ಯಾಯಾಲಯವು 3 ಲಕ್ಷ 87 ಸಾವಿರದ 500 ರೂ. ನೀಡುವಂತೆ 27 ಮಾರ್ಚ್ 2018 ರಂದು ಆದೇಶ ಮಾಡಿತ್ತು. ಆದರೆ ಪರಿಹಾರ ನೀಡದೆ ಸತಾಯಿಸಿದ ಕೆಎಸ್ಸಾರ್ಟಿಸಿ ವಿರುದ್ಧ ಫಕೀರಪ್ಪ ನ್ಯಾಯಾಲಯಕ್ಕೆ ಮರು ದೂರು ನೀಡಿದ್ದು, ಅದರಂತೆ ನ್ಯಾಯಾಧೀಶರು ಬಡ್ಡಿ ಸೇರಿ 4 ಲಕ್ಷ 78 ಸಾವಿರದ 225 ರೂ. ದಂಡ ನೀಡುವಂತೆ ಸೂಚನೆ ನೀಡಿದ್ದಲ್ಲದೆ ಬಸ್ಸನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ.