(ನ್ಯೂಸ್ ಕಡಬ) newskadaba.com ಕಡಬ. ಅ.24. ಆಲಂಕಾರು ಗ್ರಾಮದ ಶ್ರೀ ಭಾರತೀ ಶಾಲೆಯ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಶಾಲಾ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಶಿಕ್ಷಣದಲ್ಲಿ ಅಂಕವೊಂದೆ ಮಾನದಂಡವಾದಾಗ ಸಂಸ್ಕಾರ ಸಂಸ್ಕೃತಿ ಮುಂದಿನ ಪೀಳಿಗೆಗೆ ಪಸರಿಸುವುದಿಲ್ಲ. ಪಂಚಮುಖಿ ಶಿಕ್ಷಣ, ಧರ್ಮಾಧರಿತ ಶಿಕ್ಷಣದಿಂದ ನಮ್ಮ ದೇಶದ ಪರಂಪರಾಗತ ಪದ್ದತಿಗಳು ಉಳಿಯುತ್ತವೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಡಿಯಲಿ ನಡೆಯುತ್ತಿರುವ ವಿದ್ಯಾ ಸಂಸ್ಥೆಗಳಲ್ಲಿ ಪದ್ದತಿಗಳನ್ನು ಉಳಿಸಿ ಬೆಳೆಸುವ ಶಿಕ್ಷಣ ನೀಡಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಭಕ್ತಿಗೆ ಪ್ರಧಾನ ಸ್ಥಾನ ನೀಡಲಾಗಿದೆ. ಭಕ್ತಿಯ ಮೂಲಕ ದೇವರ ಕಾರ್ಯ ಮಾಡಿದಾಗ ಅನುಗ್ರಹ ಪ್ರಾಪ್ತಿಯಾಗುತ್ತದೆ. ವಿದ್ಯಾ ಸಂಸ್ಥೆಯ ಅಭಿವೃದ್ದಿ , ಲೋಕ ಕಲ್ಯಾಣಾರ್ಥ ಮತ್ತು ವೈಯಕ್ತಿಕ ಸಂಕಲ್ಪಗಳ ಈಡೇರಿಕೆಗೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವದ ವೈದಿಕ ಮುಂದಾಳು ಬೆಂಗಳೂರಿನ ಲಕ್ಷ್ಮೀಪತಿ ಶರ್ಮ ಮಾತನಾಡಿ, ಕಾರ್ಯಕ್ರಮದ ಪೂಜಾ ವಿಧಿ ವಿಧಾನಗಳನ್ನು ವಿವರಿಸಿದರು. ರಾಮಕೃಷ್ಣ ಕಾಟುಕುಕ್ಕೆ ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಪ್ರತಿಫಲದ ಬಗ್ಗೆ ಮಾಹಿತಿ ನೀಡಿದರು.
ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು ಮಾತನಾಡಿ, ಮುಂದಿನ ಡಿಸೆಂಬರ್ ತಿಂಗಳಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದ್ದು ಎಲ್ಲರ ಸಹಕಾರ ಅಗತ್ಯ ಎಂದರು. ಸಂಸ್ಥೆಯ ಸಂಚಾಲಕ ಈಶ್ವರ ಗೌಡ ಪಜ್ಜಡ್ಕ ಉಪಸ್ಥಿತರಿದ್ದರು.
ಆಡಳಿತ ಸಮಿತಿ ಕಾರ್ಯದರ್ಶಿ ಗಂಗಾಧರ ಗೌಡ ಕುಂಡಡ್ಕ ಪ್ರಸ್ತಾವಿಸಿ ಸ್ವಾಗತಿಸಿ ರಜತ ಸಮಿತಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಆತೂರು ವಂದಿಸಿದರು. ಶಿಕ್ಷಕ ಯಧುಶ್ರೀ ಆನೆಗುಂಡಿ ನಿರೂಪಿಸಿದರು.