(ನ್ಯೂಸ್ ಕಡಬ) newskadaba.com ಆಲಂಕಾರು.ಅ.23, ಕೊನೆಯ ಕ್ಷಣದಲ್ಲಿ ಅಬ್ಬರಿಸಿದ ವರುಣನು ಈ ವರ್ಷವು ರೈತರಿಗೆ ಮರಣ ಶಾಸನವನ್ನೇ ಬರೆದಿದ್ದಾನೆ. ಈ ಬಾರಿಯ ಬೇಸಾಯದ ಆರಂಭದಿಂದ ಅಂತ್ಯದವರೆಗೆ ವರುಣ ಒಂದಲ್ಲ ಒಂದು ರೀತಿಯಲ್ಲಿ ರೈತರನ್ನು ಸತಾಯಿಸಿದ್ದು, ಇದೀಗ ಭತ್ತ ಕಟಾವು ಬರುವ ಹಂತ ತಲುಪಿದ್ದು ನಿರಂತರವಾಗಿ ಸಂಜೆ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಾಯದ ಆರಂಭದಲ್ಲಿ ಮಳೆ ಒಂದು ತಿಂಗಳು ತಡವಾದ ಪರಿಣಾಮ ಸೂಕ್ತ ಸಮಯದಲ್ಲಿ ನೇಜಿ ನಾಟಿ ಮಾಡಲು ಸಾಧ್ಯವಾಗದೆ ರೈತರನ್ನು ಒತ್ತಡಕ್ಕೆ ತಳ್ಳಿತ್ತು. ಈಗ ಬೆಳೆದು ನಿಂತ ಪೈರು ಗಾಳಿಮಳೆಯಿಂದಾಗಿ ನೆಲಕ್ಕಚ್ಚಿದ್ದು ಕಟಾವು ಮಾಡಲಾಗದ ಪರಿಸ್ಥಿತಿಯನ್ನು ನಿರ್ಮಿಸಿದ್ದು ರೈತರಲ್ಲಿ ಆತಂಕವನ್ನು ಸೃಷ್ಠಿಸಿದೆ.
ಇದೀಗ ಪೈರು ಕಟಾವಿನ ಹಂತಕ್ಕೆ ಬಂದಿದ್ದು ಸಂಜೆ ವೇಳೆ ನಿರಂತರವಾಗಿ ಸುರಿಯುವ ಗಾಳಿ ಮಳೆಯಿಂದಾಗಿ ಭತ್ತ ಗದ್ದೆಯಲ್ಲೇ ಮೊಳಕೆ ಒಡೆಯುವ ಹಂತವನ್ನು ತಲುಪಿದೆ. ಪೈರು ಬಿದ್ದ ಪರಿಣಾಮ ಕಾಡು ಪ್ರಾಣಿಗಳಿಗೆ ಸುಲಭದ ಆಹಾರದ ಸೊತ್ತಾಗಿ ಪರಿಣಮಿಸಿದೆ. ಕಾಡು ಪ್ರಾಣಿಗಳು ನಿರಂತರವಾಗಿ ಗದ್ದೆಗಳಿಗೆ ದಾಳಿ ಮಾಡುತ್ತಿದ್ದು ಇದ್ದ ಪೈರನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ಕಾಡು ಹಂದಿ, ಹೆಗ್ಗಣ ದಾಳಿ ಮಾಡಿದರೆ, ಹಗಲಲ್ಲಿ ನವಿಲು, ಗುಬ್ಬಚ್ಚಿ, ಗಿಳಿಗಳ ಹಿಂಡಿನ ಜತೆಗೆ ಮಂಗಗಳು ದಾಳಿ ಮಾಡಿ ಪೈರನ್ನು ನಾಶ ಮಾಡುತ್ತಿವೆ. ಇದರ ಪರಿಣಾಮ ಸಕಾಲದಲ್ಲಿ ಕಟಾವು ಮಾಡಲಾಗದೆ ರೈತರು ನಷ್ಟ ಅನುಭವಿಸುವ ಒತ್ತಡಕ್ಕೆ ಒಳಗಾಗಿದ್ದಾರೆ.
ಕಟಾವಿಗೆ ಯಂತ್ರದ ಬದಲು ಮನುಷ್ಯರೇ ಅನಿವಾರ್ಯ: ಕೂಲಿ ಕಾರ್ಮಿಕರ ಕೊರತೆಯ ಪರಿಣಾಮ ಹೆಚ್ಚಿನ ಬೇಸಾಯ ಕೆಲಸ ಕಾರ್ಯಗಳು ಯಾಂತ್ರಿಕೃತವಾಗಿಯೇ ನಡೆಯುತ್ತಿದೆ. ಗದ್ದೆ ಉಳುಮೆಗೆ ಪವರ್ ಟಿಲ್ಲರ್ ಉಪಯೋಗಿಸಿದರೆ ನೇಜಿ ನಾಟಿ ಮಾಡುವುದಕ್ಕಾಗಿ ನಾಟಿ ಯಂತ್ರದ ಮೊರೆ ಹೋಗುತ್ತಾರೆ. ಇದೀಗ ಕಟಾವಿಗೂ ಯಂತ್ರವನ್ನು ಉಪಯೋಗಿಸುತ್ತಿದ್ದು ಭತ್ತ ಬೇರ್ಪಡಿಸುವ ಕಾರ್ಯವನ್ನು ಯಂತ್ರದ ಮೂಲಕವೇ ನಡೆಸಲಾಗುತ್ತಿದೆ. ಇದರಿಂದಾಗಿ ದುಬಾರಿ ಕೂಲಿ ಕಾರ್ಮಿಕರ ಸಂಬಳದ ಒತ್ತಡದಿಂದ ರೈತರು ವಿಮುಕ್ತರಾಗಿ ಸಕಾಲದಲ್ಲಿ ಎಲ್ಲಾ ಬೇಸಾಯದ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ಈ ಬಾರಿಯ ಪೈರು ಗಾಳಿ ಮಳೆಯಿಂದಾಗಿ ನೆಲಕಚ್ಚಿದ್ದುದರ ಪರಿಣಾಮ ಕಟಾವು ಯಂತ್ರದಲ್ಲಿ ಸಾಧ್ಯವಾಗದೆ ಮನುಷ್ಯರೇ ಅನಿವಾರ್ಯವಾಗಿದೆ.
ಸಂಜೆ ವೇಳೆ ಕೃತಕ ನೆರೆ: ಕಳೆದ ವರ್ಷ ಆರಂಭದಲ್ಲೇ ಗದ್ದೆಗಳಿಗೆ ನೆರೆ ನೀರು ನುಗ್ಗಿದರ ಪರಿಣಾಮ ಕಡಬ ತಾಲೂಕಿನ ಆಲಂಕಾರು ಗ್ರಾಮ ಅತೀ ಹೆಚ್ಚು ಭತ್ತ ಬೇಸಾಯವನ್ನು ಕಳೆದುಕೊಂಡ ಗ್ರಾಮವಾಗಿರುತ್ತದೆ. ಆಲಂಕಾರು ಗ್ರಾಮದ ಪಜ್ಜಡ್ಕ, ಪೊಯ್ಯಲಡ್ಡ, ಬುಡೇರಿಯಾ, ಶರವೂರು ಹಾಗೂ ಕೊಂಡಾಡಿ ಮುಂತಾದ ಪ್ರದೇಶದಲ್ಲಿ 17 ಎಕ್ರೆ ಗದ್ದೆ ನೆರೆ ನೀರಿಗೆ ಮುಳುಗಿ ಸಂಪೂರ್ಣ ನಾಶವಾಗಿತ್ತು. ಆದರೆ ಈ ವರ್ಷ ನೆರೆ ನೀರು ಗದ್ದೆಗಳಿಗೆ ಬಂದಿದ್ದರೂ ನೇಜಿಗೆ ಯಾವುದೇ ಹಾನಿಯಾಗಿರಲಿಲ್ಲ. ಆದರೆ ಹಿಂಗಾರು ಮಳೆಯು ಚುರುಕುಗೊಂಡಿದ್ದು, ಸಂಜೆ ವೇಳೆ ಸುರಿಯುವ ಗಾಳಿ ಮಳೆಯ ನೀರು ಗದ್ದೆಗಳಿಗೆ ನುಗ್ಗುತ್ತಿದ್ದು, ತೆನೆ ತುಂಬಿದ ಪೈರು ನೆಲಕಚ್ಚುತ್ತಿದೆ. ಇದರಿಂದಾಗಿ ಪೈರಿನಲ್ಲಿಯೇ ಭತ್ತ ಮೊಳಕೆಯೊಡೆಯುವ ಹಂತವನ್ನು ತಲುಪಿದೆ. ಮತ್ತು ರೈತರಿಗೆ ಕಟಾವಿಗೂ ಕಷ್ಠಕರವಾಗಿದ್ದು ಕಷ್ಟಪಟ್ಟು ಕಟಾವು ಮಾಡಿದ ಭತ್ತವನ್ನು ಧೀರ್ಘಕಾಲ ಸಂಗ್ರಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದು ಆರು ದಿವಸ ಈ ಬಾರಿ 12 ದಿವಸ ಗದ್ದೆಗಳು ಯಾವುದೇ ಪ್ರಾಕೃತಿಕ ವಿಕೋಪ, ಕಾಡು ಪ್ರಾಣಿ ದಾಳಿಯಾಗದಿದ್ದರೆ ಕೇವಲ ಆರು ದಿನದಲ್ಲಿ ಕಟಾವು ಕಾರ್ಯ ಮುಗಿಯುತ್ತಿತ್ತು. ಯಂತ್ರದ ಮೂಲಕ ಕಟಾವಾದರೆ ಕೇವಲ 3 ಗಂಟೆಯಲ್ಲಿ ಎಲ್ಲವು ಮುಗಿಯುತ್ತಿತ್ತು. ಆದರೆ ಈ ಬಾರಿ ಯಂತ್ರ ಉಪಯೋಗಿಸುವಾಗಿಲ್ಲ. ಮನುಷ್ಯರ ಮೂಲಕವೆ ಕಟಾವು ಮಾಡಬೇಕಾಗುತ್ತದೆ. ಕಳೆದ ಬಾರಿಯ ತನಕ ಆರು ದಿನದಲ್ಲಿ ಮುಗಿಯುತ್ತಿದ್ದ ಕಟಾವು ಕಾರ್ಯಕ್ಕೆ ಈ ವರ್ಷ 12 ದಿವಸ ಸಾಗುವುದರಲ್ಲಿ ಸಂಶಯವಿಲ್ಲ. ಆರು ದಿನದ ಕೂಲಿ ಕಾರ್ಮಿಕ ಸಂಬಳ ಹೆಚ್ಚುವರಿ ಹೊರೆಯಾಗಲಿದೆ ಎಂದು ಸಂತ್ರಸ್ಥ ರೈತ ಬಾಬು ನೆಕ್ಕರೆ ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಪರಿಶೀಲಿಸಿ ನಷ್ಟಕ್ಕೆ ಪರಿಹಾರ ನೀಡಲಾಗುವುದು_ ಪಂಜ ವಲಯ ಅರಣ್ಯಾಧಿಕಾರಿಗಳು: ಬೆಳೆ ಕಳಕೊಂಡ ರೈತರಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಸಾಧ್ಯವಿದೆ. ಸವಿಸ್ತಾರವಾದ ಮಾಹಿತಿಯುಳ್ಳ ಅರ್ಜಿಯನ್ನು ತಾಶೀಲ್ದಾರರಿಗೆ ನೀಡಬೇಕು. ತಶೀಲ್ದಾರರಿಂದ ಸೂಚನೆ ಬಂದ ಕೂಡಲೆ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೈರು ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿ ನಷ್ಟದ ಪಟ್ಟಿಯನ್ನು ತಯಾರಿಸಲಾಗುವುದು. ಪೈರು ಪ್ರಾರಂಭಿಕ ಹಂತದಲ್ಲಿದ್ದರೆ ಎಕ್ರೆಗೆ 2720 ರೂಪಾಯಿ ಪರಿಹಾರ ನೀಡಲಾಗುವುದು. ಕಟಾವಿನ ಹಂತದಲ್ಲಿದ್ದರೆ ಇಳುವರಿಯ ಪ್ರಮಾಣವನ್ನು ಹೊಂದಿಕೊಂಡು ಪರಿಹಾರದ ಮೊತ್ತ ನೀಡಲಾಗುವುದು ಎಂದು ಕಡಬ ವಲಯ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಸದಾನಂದ ಆಲಂಕಾರು