(ನ್ಯೂಸ್ ಕಡಬ)newskadaba.com ಅ. 21. ಕಡಬ: ವಿದ್ಯಾ ಮಂದಿರ ಮತ್ತು ದೇವಾಲಯಗಳು ಸಮಾಜದಲ್ಲಿ ಸಂಸ್ಕಾರ ಸಂಸ್ಕ್ರಿತಿಯನ್ನು ಬೆಳೆಸುವ ಕೇಂದ್ರಗಳು. ಪ್ರತಿ ಊರಿನಲ್ಲಿ ನಮ್ಮ ಹಿರಿಯರು ಸುದುದ್ದೇಶವಿಟ್ಟುಕೊಂಡು ಸಂಸ್ಕಾರ ಕೇಂದ್ರಗಳನ್ನು ತೆರೆದು ದೇಶಿ ಸೊಗಡನ್ನು ಉಳಿಸುವ ಕಾರ್ಯ ಮಾಡಿದ್ದಾರೆ. ಸಂಸ್ಕಾರ ಶಿಕ್ಷಣ ನೀಡಿ ನಮ್ಮ ಮಕ್ಕಳನ್ನು ದೇಶದ ಆಸ್ತಿಗಳನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಕಡಬ ವಿದ್ಯಾನಗರದ ಸರಸ್ವತೀ ವಿದ್ಯಾಲಯದ ವಠಾರದಲ್ಲಿರುವ ಶ್ರೀ ಭಾರತೀ ಶಿಶುಮಂದಿರದ ನೂತನ ಕುಟೀರ `ಸುರ್ದಶನ ‘ದ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ ಆರ್ಶೀವಚನ ನೀಡಿ, ಭಾರತದ ಜನರಿಗೆ ಜ್ಞಾನದ ಅರಿವು ಹೆಚ್ಚು. ಪ್ರತಿಯೊಂದು ಸಂಶೋಧನೆಗಳಲ್ಲಿಯೂ ಭಾರತೀಯರದೆ ಸಿಂಹಪಾಲು . ನಮ್ಮ ದೇಶವನ್ನಾಳುವ ಆಡಳಿತ ಜ್ಞಾನದ ಸಧ್ಭಳಕೆಗೆ ಪೂರಕ ವಾತವರಣ ನಿರ್ಮಾಣ ಮಾಡುತ್ತಿದೆ. ಹಾಗಾಗಿ ವಿದೇಶಕ್ಕೂ ಹೋದರೂ ಸ್ವದೇಶದ ಭಾವನೆ ಮೇಲೈಸುತ್ತದೆ. ಮಕ್ಕಳಿಗೆ ತಳಮಟ್ಟದಿಂದಲೇ ಶಿಶುಮಂದಿರಗಳ ಮೂಲಕ ನಮ್ಮ ಸಂಸ್ಕ್ರತಿ ಸಂಸ್ಕಾರವನ್ನು ನೆನಪು ಮಾಡುವ ಶಿಕ್ಷಣ ನೀಡಿ ಮಕ್ಕಳನ್ನು ದೇಶದ ಆಸ್ತಿಗಳನ್ನಾಗಿಸುವುದು ಮಾದರಿಯಾಗಿದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ|ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದೇಶಿಯರಿಗೆ ತಲೆಬಾಗುವ ವ್ಯವಸ್ಥೆಯಿಂದ ಬದಲಾಗಿ ಜಗತ್ತು ಭಾರತದ ಕಡೆ ನೋಡುವ ಕಾಲಘಟ್ಟದಲ್ಲಿದ್ದೇವೆ. ದೇಶದಲ್ಲಿ ಬೆಳೆಯುವ ಹರಶಿನದಂತಹ ಆರ್ಯವೇದ ವಸ್ತುಗಳಿಗೆ ಅಮೇರಿಕದಂತಹ ದೇಶಗಳು ಪೇಟೆಂಟ್ ಪಡೆದಿರುವುದು , ದೇಶದಲ್ಲಿ ಹುಟ್ಟಿದ ಆರ್ಯವೇದ ಚಿಕಿತ್ಸೆ ಇದೀಗ ವಿಶ್ವದಾಂದ್ಯಂತ ಮಣ್ಣನೆ ಗಳಿಸಿರುವುದು ನಮ್ಮೆಲ್ಲರ ಹೆಮ್ಮೆ. ಮಕ್ಕಳಿಗೆ ಧರ್ಮ , ದೇಶ , ಜೀವನ ಮೌಲ್ಯಗಳನ್ನು ತಳಮಟ್ಟದಿಂದ ಶಿಶುಮಂದಿರಗಳಲ್ಲಿ ನೀಡಲಾಗುತ್ತಿದೆ. ದೇಶಿ ಸಂಸ್ಕಾರ ನೀಡಿ ನಮ್ಮ ಭಾಷೆಯನ್ನು ಉಳಿಸಿಕೊಂಡು ಸಂಸ್ಕಾರ ಶಿಕ್ಷಣ ನೀಡುವುದು ವಿವೇಕಾನಂದ ವಿದ್ಯಾವರ್ದಕ ಸಂಘದ ಧೈಯವಾಗಿದೆ ಎಂದರು.
ವೇಣೂರಿನ ಸೇವಾ ಶರಧಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಭಾಸ್ಕರ ಪೈ, ಸುಬ್ರಹ್ಮಣ್ಯದ ಉದ್ಯಮಿ ಯಜ್ನೇಶ್ ಆಚಾರ್, ವೇಣೂರಿನ ಉದ್ಯಮಿ ವಿಕಾಸ್ ಜೈನ್ , ಕಡಬದ ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಯ ಅಧ್ಯಕ್ಷ ರವಿರಾಜ ಶೆಟ್ಟಿ ಕಡಬ ಶುಭಹಾರೈಸಿದರು. ಶ್ರೀ ಭಾರತೀ ಶಿಶುಮಂದಿರದ ಅಧ್ಯಕ್ಷ ಪ್ರಕಾಶ್ ಎನ್.ಕೆ. ಶಿಶುಮಂದಿರ ವ್ಯವಸ್ಥಾಪಕಿ ಸವಿತಾ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಪ್ರಸ್ತಾವಿಸಿದರು. ಶಿಶುಮಂದಿರ ಆಡಳಿತ ಸಮಿತಿ ಸದಸ್ಯ ಎ.ಪಿ ಗಿರೀಶ್ ಸ್ವಾಗತಿಸಿದರು. ಕಾರ್ಯದರ್ಶಿ ದಯಾನಂದ ಪುರಿಯ ವಂದಿಸಿದರು. ಸದಸ್ಯೆ ಅಪರ್ಣ ಮಹೇಶ್ ನಿರೂಪಿಸಿದರು.