(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.15. ಸೋಮವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆಂದು ತೆರಳಿದ ಖಾಸಗಿ ಬಸ್ಸೊಂದು ಟಯರ್ ಪಂಕ್ಚರ್ ಆಗಿ ಶಿರಾಡಿ ಘಾಟಿಯಲ್ಲಿ ಬಾಕಿಯಾಗಿದ್ದರಿಂದ ಮಂಗಳವಾರ ಮಧ್ಯಾಹ್ನದವರೆಗೂ ಪ್ರಯಾಣಿಕರು ಬದಲಿ ವ್ಯವಸ್ಥೆ ಇಲ್ಲದೆ ಕಂಗಾಲಾದ ಘಟನೆ ಶಿರಾಡಿಯಲ್ಲಿ ನಡೆದಿದೆ.
ಭಾರತಿ ಸಂಸ್ಥೆಗೆ ಸೇರಿದ ಖಾಸಗಿ ಬಸ್ಸು ಸೋಮವಾರ ರಾತ್ರಿ ಮಂಗಳೂರಿನಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಬೆಂಗಳೂರಿಗೆ ಹೊರಟಿದ್ದು, ಮಧ್ಯರಾತ್ರಿ ವೇಳೆಗೆ ಶಿರಾಡಿ ಘಾಟಿಯ ಅಂತ್ಯಕ್ಕೆ ತಲುಪುತ್ತಿದ್ದಂತೆ ಬಸ್ಸಿನ ಎರಡು ಚಕ್ರಗಳು ಪಂಕ್ಚರ್ ಆಗಿ ನಿಂತಿದೆ. ಹೆಚ್ಚುವರಿ 2 ಟಯರ್ ಗಳಿದ್ದರೂ ಬಸ್ಸು ಚಾಲಕ ಹಾಗೂ ನಿರ್ವಾಹಕ ಸೇರಿಕೊಂಡು ಚಕ್ರಗಳನ್ನು ವರ್ಗಾಯಿಸುವ ಕಾರ್ಯಕ್ಕೆ ಕೈ ಹಾಕಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಯಾಣಿಕರು ಬಸ್ಸಿನ ಚಾಲಕ – ನಿರ್ವಾಹಕರನ್ನು ತರಾಟೆಗೆತ್ತಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸ್ಥೆಯ ಮ್ಯಾನೇಜರ್ ಗೆ ನಿರಂತರ ಕರೆ ಮಾಡಿದರೂ ಕನಿಷ್ಠ ಕರೆ ಸ್ವೀಕರಿಸುವ ಸೌಜನ್ಯವನ್ನು ತೋರಿಲ್ಲವಾಗಿದ್ದು, ಪರಿಣಾಮ ಮಂಗಳವಾರ ಮಧ್ಯಾಹ್ನ 11 ಗಂಟೆಯವರೆಗೂ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಯಿತು. ಮಧ್ಯಾಹ್ನದ ವೇಳೆಗೆ ಬೇರೆ ಬಸ್ಸನ್ನು ಸ್ಥಳಕ್ಕೆ ಕಳುಹಿಸಿದ ಮೇಲೆ ಪ್ರಯಾಣಿಕರು ಬೆಂಗಳೂರಿಗೆ ತೆರಳಿದರು. ಕರೆ ಸ್ವೀಕರಿಸದೆ ಇದ್ದುದಕ್ಕೆ ಪ್ರಯಾಣಿಕರು ಭಾರತಿ ಸಂಸ್ಥೆಯ ಮ್ಯಾನೇಜರ್ ಗೆ ಹಿಡಿಶಾಪ ಹಾಕುತ್ತಿದ್ದರು.