(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.14. ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಡಬದಿಂದ ವೈದ್ಯಾಧಿಕಾರಿಯವರ ವರ್ಗಾವಣೆಗೆ ಆದೇಶವಾಗಿದ್ದರೂ ಸಹ ಜಿಲ್ಲಾ ಆರೋಗ್ಯಾಧಿಕಾರಿಗಳು ತಡೆ ನೀಡಿರುವುದು ಸರಿಯಲ್ಲ ಎಂದು ಕೊಯಿಲ ಗ್ರಾ.ಪಂ.ನ ಕೆಡಿಪಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಕೊಯಿಲ ಗ್ರಾ.ಪಂ. ಅಧ್ಯಕ್ಷೆ ಹೇಮಾ ಎಂ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರೋರ್ವರು, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಖಾಲಿಯಿದ್ದು, ಇಲ್ಲಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಿಂದ ವೈದ್ಯಾಧಿಕಾರಿಯ ವರ್ಗಾವಣೆ ಆದೇಶವಾಗಿದೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿಯವರು ವರ್ಗಾವಣೆಗೆ ತಡೆ ನೀಡಿದ್ದಾರೆ ಎನ್ನಲಾಗಿದ್ದು, ಇದು ಸರಿಯಲ್ಲ. ವೈದ್ಯಾಧಿಕಾರಿ ಇಲ್ಲದೆ ಇರುವುದರಿಂದ ದಿನನಿತ್ಯ ಆಗಮಿಸುವ ರೋಗಿಗಳಿಗೆ ತೊಂದರೆಯಾಗುತ್ತಿರುವುದರಿಂದ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.