(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ: ಕಂದಾಯ ಇಲಾಖೆಗೆ ಆವರಣ ಗೋಡೆಯ ಆಸೆ ತೋರಿಸಿ, ಕಂದಾಯ ಇಲಾಖೆಯ ಭೂಮಿಯನ್ನು ಅತಿಕ್ರಮಿಸಿ ಅದರ ಇನ್ನೊಂದು ಬದಿಯಲ್ಲಿರುವ ವಾಣಿಜ್ಯ ಹಾಗೂ ವಸತಿ ಸಂಕೀರ್ಣಗಳಿಗೆ ಬಸ್ ನಿಲ್ದಾಣದಿಂದ ನೇರ ರಸ್ತೆ ಸಂಪರ್ಕ ಕಲ್ಪಿಸಲು ಉಪ್ಪಿನಂಗಡಿ ಗ್ರಾ.ಪಂ. ಹುನ್ನಾರ ನಡೆಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದು, ಈ ಬಗ್ಗೆ ಶಾಸಕರು, ಕಂದಾಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಈ ಕಾಮಗಾರಿಗೆ ಬ್ರೇಕ್ ಬಿದ್ದಿದೆ.
ಉಪ್ಪಿನಂಗಡಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯೇ ಕಂದಾಯ ಇಲಾಖೆಯ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನು ಇದ್ದು, ಇದರಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಆರು ಸೆಂಟ್ಸ್ ನೀಡಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ 5 ಸೆಂಟ್ಸ್ ನೀಡಿ 39 ಸೆಂಟ್ಸ್ ಜಮೀನು ಉಳಿದುಕೊಂಡಿತ್ತು. ಇದರಲ್ಲಿ ಕಂದಾಯ ಇಲಾಖೆಯ ಕಟ್ಟಡವೊಂದಿದ್ದು, ಅದರಲ್ಲಿ ಕಂದಾಯ ನಿರೀಕ್ಷಕರ ಕಚೇರಿಯಿತ್ತು. ಇದರ ಮತ್ತೊಂದು ಮಗ್ಗುಲಲ್ಲಿ ಖಾಸಗಿ ವ್ಯಕ್ತಿಗಳ ಎರಡು ಬಹುಮಹಡಿಯ ವಾಣಿಜ್ಯ ಸಂಕೀರ್ಣ ಹಾಗೂ ಎರಡು ವಸತಿ ಸಂಕೀರ್ಣವಿದ್ದು, ಅದಕ್ಕೆ ಬಸ್ ನಿಲ್ದಾಣದಿಂದ ನೇರ ರಸ್ತೆ ಸಂಪರ್ಕ ನಡೆಸುವ ಹುನ್ನಾರ ನಡೆದಿತ್ತು. ಕಳೆದ ಒಂದು ತಿಂಗಳ ಹಿಂದೆ ಗ್ರಂಥಾಲಯಕ್ಕೆ ಹಾಗೂ ಅದರ ಇನ್ನೊಂದು ಎದುರು ಬದಿಯಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿಯ ಸ್ಥಳಕ್ಕೆ ಆವರಣ ಗೋಡೆ ರಚಿಸಿ ನಡುವಿನಲ್ಲಿ ಖಾಸಗಿ ವಾಣಿಜ್ಯ ಹಾಗೂ ವಸತಿ ಸಂಕೀರ್ಣಕ್ಕೆ ರಸ್ತೆ ನಿರ್ಮಿಸುವ ಕೆಲಸ ಪ್ರಾರಂಭವಾಗಿತ್ತು. ಆದರೆ ಆ ಸಂದರ್ಭ ಇಲ್ಲಿ ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಡುವ ಉದ್ದೇಶ ನಡೆಯುತ್ತಿದೆ ಎಂದು ಆರೋಪಿಸಿದ ಸಾರ್ವಜನಿಕರು ಕಂದಾಯ ಇಲಾಖಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದು, ಅದನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗಿತ್ತು.
ಆದರೆ ಸಾಲು ಸಾಲು ಸರಕಾರಿ ರಜಾ ದಿನ ಬರುವ ಅ.5ರಂದು ಯಾವುದೇ ಸಂಶಯ ಬಾರದಂತೆ ಕೇವಲ ಗ್ರಂಥಾಲಯಕ್ಕೆ ಮಾತ್ರ ತಡೆಗೋಡೆ ನಿರ್ಮಿಸಿದ ಉಪ್ಪಿನಂಗಡಿ ಗ್ರಾ.ಪಂ. ಆದಿತ್ಯವಾರ ಬೆಳಗ್ಗೆಯಿಂದಲೇ ಅದರ ಎದುರು ಬದಿಯಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿಗೂ ಆವರಣ ಗೋಡೆ ರಚಿಸಿತ್ತು. ಇಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಂಕೀರ್ಣಕ್ಕೆ ಸಂಪರ್ಕ ಮಾರ್ಗ ಕಲ್ಪಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ ಸಾರ್ವಜನಿಕರು, ಕೂಡಲೇ ಎಚ್ಚೆತ್ತುಕೊಂಡು ಖಾಸಗಿ ವಾಣಿಜ್ಯ ಹಾಗೂ ವಸತಿ ಸಂಕೀರ್ಣಕ್ಕಾಗಿ ಕಂದಾಯ ಇಲಾಖೆಯ ಭೂಮಿಯನ್ನು ಅತಿಕ್ರಮಿಸುತ್ತಿರುವ ಗ್ರಾ.ಪಂ.ನ ಯೋಜನೆಯ ವಿರುದ್ಧ ಶಾಸಕರು, ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್, ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖಾಧಿಕಾರಿಗೆ ದೂರವಾಣಿ ಮೂಲಕ ದೂರು ನೀಡಿದರು. ಬಳಿಕ ಎಚ್ಚೆತ್ತ ಅಧಿಕಾರಿಗಳು ಗ್ರಾ.ಪಂ.ನ ಈ ಕಾಮಗಾರಿಗೆ ತಡೆ ನೀಡಿದ್ದಾರೆ.
ಕಂದಾಯ ಇಲಾಖೆಯ ಜಾಗ ಅತಿಕ್ರಮಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ರಜಾದಿನದಂದು ಆವರಣಗೋಡೆ ಕಟ್ಟಿದರೂ ನಮ್ಮ ಜಾಗವನ್ನು ಅತಿಕ್ರಮಿಸಿದರೆ ಅದನ್ನು ಕಿತ್ತು ಒಗೆಯುತ್ತೀವಿ. ಇಲ್ಲಿ ಕಂದಾಯ ಇಲಾಖೆಯ ಜಮೀನಿನ ಭದ್ರತೆಗಾಗಿ ಗ್ರಾ.ಪಂ. ಆವರಣಗೋಡೆ ಕಟ್ಟುವುದಾಗಿ ಹೇಳಿತ್ತು. ಸುತ್ತಲೂ ಆವರಣಗೋಡೆ ನಿರ್ಮಿಸಬೇಕೇ ಹೊರತು. ಅಲ್ಲಿ ಯಾವುದೇ ರಸ್ತೆ ನಿರ್ಮಿಸಲು ಅವಕಾಶವಿಲ್ಲ.
– ಎಚ್.ಕೆ. ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ, ಪುತ್ತೂರು
ಉಪ್ಪಿನಂಗಡಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಇಕ್ಕಟ್ಟಾಗಿರುವ ಕಾರಣ ಕಂದಾಯ ಇಲಾಖೆಯ ಜಾಗವನ್ನು ಪಾರ್ಕಿಂಗ್‍ಗಾಗಿ ಕೇಳುವ ಬಗ್ಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಸಾಮಾನ್ಯ ಸಭೆಯಲ್ಲಿ ಒಮ್ಮೆ ಚರ್ಚೆಯಾಗಿತ್ತು. ಆದರೆ ಇದಕ್ಕೆ ಆವರಣಗೋಡೆ ಕಟ್ಟುವುದಾಗಲಿ. ಇನ್ನೊಂದು ಬದಿಗೆ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆಯಾಗಲಿ ಚರ್ಚೆಯಾಗಿಲ್ಲ. ಈಗ ಆವರಣೆಗೋಡೆ ರಚಿಸಿ ವಾಣಿಜ್ಯ ಹಾಗೂ ವಸತಿ ಸಂಕೀರ್ಣದ ಕಡೆ ರಸ್ತೆ ಸಂಪರ್ಕ ಕಲ್ಪಿಸುವ ಹುನ್ನಾರ ಏಕಾಏಕಿ ನಡೆದಿರುವಂತದ್ದು ತಪ್ಪು. ಇದಕ್ಕೆ ನಮ್ಮದು ತೀವ್ರ ಆಕ್ಷೇಪವಿದ್ದು, ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ.
– ಸುರೇಶ್ ಅತ್ರಮಜಲು, ಸದಸ್ಯರು, ಉಪ್ಪಿನಂಗಡಿ ಗ್ರಾ.ಪಂ.