(ನ್ಯೂಸ್ ಕಡಬ) newskadaba.com ಕಡಬ, ಅ.05. ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಸಮಿತಿಯ ಘೋಷಣಾ ಸಮಾವೇಶವು ಶುಕ್ರವಾರ ರಾತ್ರಿ ಕಡಬದ ಅನುಗ್ರಹ ಸಭಾ ಭವನದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್‌ನ ರಾಜ್ಯ ಉಪಾಧ್ಯಕ್ಷರಾದ ಹಝ್ರತ್ ಡಾ|ಸಯ್ಯದ್ ಫಾಝಿಲ್ ರಿಝ್ವಿ ಕಾವಳಕಟ್ಟೆಯವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಕಡಬ ತಾಲೂಕಿನಾದ್ಯಂತ ಬಡ ಕುಟುಂಬಸ್ಥರು, ನಿರ್ಗತಿಕರು, ವಿಕಲಚೇತನರು, ಪ್ರಾಯ ಪೂರ್ತಿಯಾಗಿ ಆರ್ಥಿಕ ಸಂಕಷ್ಟದಿಂದ ವಿವಾಹವಾಗದೆ ಉಳಿದಿರುವ ಹೆಣ್ಣು ಮಕ್ಕಳು , ವಿಧವೆಯರು, ವೃದ್ಧರು, ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಅಂತಹವರನ್ನು ಸಮಾಜ ಮುಖಿಯಾಗಿ, ಸಮಾಜದಲ್ಲಿ ಆರ್ಥಿಕ ಸಬಲೀಕರಣ ನೀಡಿ ಮುಂದೆ ತರುವುದೇ ಕರ್ನಾಟಕ ಮುಸ್ಲಿಂ ಜಮಾಅತೀನ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರವರ್ತಿಸಲು ರಚಿಸಲಾಗಿರುವ ಕರ್ನಾಟಕ ಮುಸ್ಲಿಂ ಜಮಾಅತ್ ಎಲ್ಲರ ಆಶಾ ಭಾವನೆಗಳನ್ನು ನಿವಾರಿಸಿ ಮುನ್ನಡೆಯುವ ಸಂಘಟನೆಯಾಗಲಿ ಎಂದು ಹಾರೈಸಿದರಲ್ಲದೆ ಮುಸಲ್ಮಾನರೆಲ್ಲರು ಒಟ್ಟಾಗಿ ಪ್ರೀತಿ ವಾತ್ಸಲ್ಯದಿಂದ ಜೀವಿಸುತ್ತಾ ಇತರರೊಂದಿಗೆ ಸೌಹಾರ್ದತೆಯಿಂದ ಮುಂದೆ ಸಾಗೋಣ ಎಂದರು.
ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಮೌಲನಾ ಹಾಜಿ ಅಬೂ ಸುಫಿಯಾನ್ ಮದನಿಯವರು ಉದ್ಘಾಟಿಸಿ ಮಾತನಾಡಿ ಅಲ್ಪಸಂಖ್ಯಾತ ಮುಸ್ಲಿಮರ ಕಿದ್ಮತ್ ಮಾಡಲು ಇರುವಂತಹ ಈ ಸಮಿತಿಯಲ್ಲಿ ಯಾರೂ ದಾರಿ ತಪ್ಪುವಂತಿಲ್ಲ. ವಿಧ್ವಂಸಕ ಕೃತ್ಯ ಎಸಗುವಂತಿಲ್ಲ. ಮೋಸ, ವಂಚನೆ, ಅನ್ಯಾಯ, ಅನಾಚಾರ, ಮಾಡುವಂತಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ, ವಾಸ್ತವ್ಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ನೆಲೆಗಟ್ಟನ್ನು ಕಲ್ಪಿಸಿ ಕೋಡುವಲ್ಲಿ ಉದಾರ ದಾನಿಗಳಾಗಬೇಕಾಗಿದ್ದು, ತನ್ನನ್ನು ತಾನು ಬೆಳೆಸಿಕೊಳ್ಳದೆ ಬಡಪಾಯಿ ನಿರ್ಗತಿಕರನ್ನು ಮುಖ್ಯ ವಾಹಿನಿಗೆ ತಂದು ಬಡವರ ಮಕ್ಕಳಿಗೆ ,ಧಾರ್ಮಿಕ, ಲೌಕಿಕ, ಶಿಕ್ಷಣ ನೀಡುವುದಲ್ಲದೆ , ಬಡವರ ಹೆಣ್ಣು ಮಕ್ಕಳಿಗೆ ವಿವಾಹ ಸಹಾಯ ಹಸ್ತ ನೀಡುವುದು, ವಾಸ್ತವ್ಯದ ಮನೆ ಇಲ್ಲದೆ ಮನೆ ಕಟ್ಟಲು ಸಾಧ್ಯವಾಗದೆ ನಿರ್ಗತಿಕರಾಗಿರುವ ಬಡವರಿಗೆ ಮನೆ ಕಟ್ಟಿ ಕೊಡುವುದು ಸೇರಿದಂತೆ ಎಲ್ಲಾ ರೀತಿಯಿಂದಲೂ ಸಹಕರಿಸಬೇಕು. ಸರಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ಒದಗಿಸಿಕೊಡಲು ಪ್ರಾಮಾಣಿಕವಾಗಿ, ಶ್ರಮಿಸಬೇಕಾಗಿದೆ ಎಂದರು.
ಕರ್ನಾಟಕ ಮುಸ್ಲಿಂ ಜಮಾಅತಿನ ರಾಜ್ಯ ಪ್ರಧಾನ ಸಂಚಾಲಕರಾದ ಹಾಜಿ ಮೌಲನಾ ಡಾ|ಎಂ.ಎಸ್ ಝೈನಿ ಕಾಮಿಲ್ ಸಖಾಫಿಯವರು ಸಂದೇಶ ಭಾಷಣ ಮಾಡಿ ಪ್ರಕೃತಿ ರಮಣೀಯವಾದ ಶ್ರೇಷ್ಠ ಭಾರತ ಭೂಮಿಯಲ್ಲಿ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ದೂಷಿಸುವುದಿಲ್ಲ. ಎಲ್ಲಾ ಧರ್ಮಗಳ ಸಾರ ಒಂದೇ ಅಗಿದ್ದು ಹಿಂದೂ ಧರ್ಮವೂ ಐಕ್ಯತೆಯಿಂದ ಪ್ರೀತಿ ವಾತ್ಸಲ್ಯವನ್ನು ಸಾರಿದರೆ ಕ್ರಿಶ್ಚಿಯನ್ ಧರ್ಮವೂ ಪ್ರೀತಿಯನ್ನು ಬೋದಿಸುತ್ತದೆ. ಇಸ್ಲಾಂ ಧರ್ಮ ಸೌಹಾರ್ದತೆಯನ್ನು ತ್ಯಾಗ ಮನೋಭಾವವನ್ನು ಸಾರುತ್ತದೆ. ನಾವು ಇದನ್ನು ಅರ್ಥೈಸಿಕೊಂಡು ಜೀವಿಸಿದಲ್ಲಿ ಭವ್ಯ ಭಾರತದ ಕನಸನ್ನು ನನಸಾಗಿಸಬಹುದು ಎಂದ ಅವರು ಹಗೆತನ, ದ್ವೇಷ , ವೈರತ್ವ ಬಿಟ್ಟು ಒಮ್ಮತದಿಂದ ಬಾಳುವ ಕಾಲ ಸನ್ನಿಹಿತವಾಗಿದೆ. ದಾನ ಧರ್ಮದೊಂದಿಗೆ ಉದಾರ ಕೊಡುಗೆ ನೀಡುವ ಮೂಲಕ ಪರೋಪಕಾರ ಮನೋಭಾವದಿಂದ ಹಿಂದುಳಿದವರನ್ನು ಮುಂದೆ ತರುವಲ್ಲಿಈ ಸಂಘಟನೆ ಯಶಸ್ವಿಯಾಗಲೀ ಎಂದು ಹಾರೈಸಿದರು.
ದ.ಕ ಜಿಲ್ಲಾ ಮುಸ್ಲಿಂ ಜಮಾಅತ್ ಸಂಚಾಲಕ ಅಶ್ರಫ್ ಕಿನಾರಾ ಶುಭ ಹಾರೈಸಿದರು. ಬಿ.ಎಂ. ಉಮ್ಮರ್ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮರ್ದಾಳ ಕೆ.ಎಸ್. ಶಾಹುಲ್ ಹಮೀದ್ ತಂಗಳ್ ದುಃವಾ ಪ್ರಾರ್ಥನೆಗೈದರು. ಸಭೆಯಲ್ಲಿ ತಾಲೂಕು ಸಮಿತಿಯನ್ನು ರಾಜ್ಯ ಉಪಾಧ್ಯಕ್ಷ ಡಾ|ಎಂ.ಎಸ್. ಝೈನಿ ಘೋಷಿಸಿದರು. ಕೇಪು ಕೈರುಲ್ ಕರೀಂ ಮದರಸದ ವಿದ್ಯಾರ್ಥಿ ಮುಹಮ್ಮದ್ ಪರ್‌ಹಾನ್ ಕಿರಾಅತ್ ಪಠಿಸಿದರು. ರಾಜ್ಯ ಕಾರ್ಯದರ್ಶಿ ಸಯ್ಯದ್ ಮೀರಾ ಸಾಹೇಬ್ ಸ್ವಾಗತಿಸಿ, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ವಂದಿಸಿದರು. ಜಿಲ್ಲಾ ಕಾರ್‍ಯದರ್ಶಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಕಾರ್‍ಯಕ್ರಮ ನಿರೂಪಿಸಿದರು. ಮಸೀದಿ ಮದರಸಗಳ ಮೌಲವಿ, ಮೌಝಿಮ್, ಸದರ್, ಮುಅಲ್ಲಿಂಗಳಿಗೆ ಸಂಬಳ ಕೊಟ್ಟು ಜಮಅತ್ ನಡೆಸಲು ಸಾಧ್ಯವಾಗದಂತಹ ಮೊಹಲ್ಲಾಗಳ ಬಗ್ಗೆ ಕಾಳಜಿ ವಹಿಸಿ ಅಂತಹ ಮೊಹಲ್ಲಾಗಳಿಗೆ ಸರಕಾರದ ವಕ್ಪ್‌ನಿಂದ ಸಂಬಳ, ಸೌಲಭ್ಯ ಒದಗಿಸಿಕೊಡುವುದು, ಮೊಹಲ್ಲಾಗಳಲ್ಲಿ ಶಾದಿಮಹಲ್ ನಿರ್ಮಿಸುವುದು, ಶಿಕ್ಷಣಕ್ಕೆ ಒತ್ತುಕೊಟ್ಟು ಸಹಕರಿಸುವುದು ಸೇರಿದಂತೆ ನೂರಾರು ರೀತಿಯಲ್ಲಿ ಸರಕಾರದ ಸೌಲಭ್ಯಗಳಿದ್ದು ಪರಿಣಾಮಕಾರಿಯಾಗಿ ಜನಪರ ಕಾಳಜಿಯಿಂ ಸೇವೆ ಸಲ್ಲಿಸುವ ಉದ್ದೇಶವನ್ನಿಟ್ಟುಕೊಂಡು ನಡೆಸುತ್ತಿರುವ ಈ ಸಂಘಟನೆಯನ್ನು ಸದ್ಬಳಕೆ ಮಾಡಿಕೊಂಡು ಪ್ರತಿ ಮೊಹಲ್ಲಾಗಳನ್ನು ಅಬಿವೃದ್ಧಿ ಪಡಿಸಲು ಯತ್ನಿಸುವುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ.