(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.06. ಶನಿವಾರ ಸಂಜೆ ವೇಳೆಗೆ ಭಾರೀ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದಿದ್ದು ಗುಡುಗಿನ ಅಬ್ಬರಕ್ಕೆ ಕಂಪನದ ಅನುಭವವಾದ ಘಟನೆ ಬೆಳ್ತಂಗಡಿ ತಾಲೂಕಿನ ಕೆಲವೆಡೆ ನಡೆದಿದ್ದು, ಜನರು ಭಯಪಡುವಂತಾಯಿತು.
ಶನಿವಾರ ಸಂಜೆ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಮಳೆಯೊಂದಿಗೆ ಭಾರೀ ಗುಡುಗು ಮಿಂಚು ಅಬ್ಬರಿಸಲಾರಂಭಿಸಿದವು. ಸಂಜೆ 6 ಗಂಟೆಯ ಸುಮಾರಿಗೆ ಭಾರೀ ಗುಡುಗೊಂದು ಗುರುವಾಯನಕೆರೆ ಪ್ರದೇಶದಲ್ಲಿ ಬಡಿದಿದ್ದು ಗುರುವಾಯನಕೆರೆ, ಗೇರುಕಟ್ಟೆ, ಬೆಳ್ತಂಗಡಿ ಸುತ್ತಮುತ್ತ ಗುಡುಗು, ಸಿಡಿಲಿನ ಸಂದರ್ಭ ಭೂಮಿ ಕಂಪನದ ಅನುಭವವಾಗಿದ್ದು, ಬಾಗಿಲುಗಳು ಕಿಟಕಿಗಳು ಕಂಪಿಸಿದ ಅನುಭವವಾಗಿದೆ. ಇದರಿಂದ ಜನರು ಇದೊಂದು ಭೂಕಂಪವಾಗಿದೆ ಎಂದು ಆತಂಕಗೊಂಡಿದ್ದರು. ಆದರೆ ಯಾವುದೇ ರೀತಿಯ ಭೂಕಂಪನಗಳು ನಡೆದಿರುವ ಬಗ್ಗೆ ಮಾಪನಗಳಲ್ಲಿ ದಾಖಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.