(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.04. ಸರಕಾರಿ ಸರ್ವೇಯರ್ ಓರ್ವ ಜಮೀನಿನ ಪೋಡಿ ಮಾಡಲು ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಘಟನೆ ಶುಕ್ರವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪುತ್ತೂರು ತಾ.ಪಂ. ಕಚೇರಿಯ ಸರ್ವೇಯರ್ ಎಂ. ಶಿವಕುಮಾರ್ ಬಂಧಿತ ಆರೋಪಿ. ಹಿರೇಬಂಡಾಡಿಯ ಗೋಪಾಲ ಮುಗೇರ ಎಂಬವರು 2015 ರಲ್ಲಿ ತನ್ನ ತಾಯಿ ಹಾಗೂ ಅಣ್ಣನ ಜಂಟಿ ಖಾತೆಯಲ್ಲಿದ್ದ ಜಮೀನನ್ನು ಪೋಡಿ ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ ಈವರೆಗೆ ಅಲ್ಲಿ ಸರ್ವೇಯರ್ ಬಂದಿರಲಿಲ್ಲ. ಈ ಬಗ್ಗೆ ಕೇಳಿದಾಗ ಸರ್ವೇಯರ್ ಶಿವಕುಮಾರ್ 30,000 ಲಂಚದ ಬೇಡಿಕೆಯಿಟ್ಟಿದ್ದು, ಇದನ್ನು 5,000 ದವರೆಗೆ ಕಂತು ಪ್ರಕಾರ ಕೊಡಲು ತಿಳಿಸಿದ್ದ. ಅದರಂತೆ ಮೊದಲ ಕಂತಿನ ಹಣವನ್ನು ಉಪ್ಪಿನಂಗಡಿಯ ಆದಿತ್ಯ ಹೊಟೇಲ್ ನಲ್ಲಿ ಪಡೆಯುವಾಗ ಎಸಿಬಿ ದಾಳಿ ನಡೆಸಿ ಬಂಧಿಸಿದೆ.
ಎಸಿಬಿ ಪ್ರಭಾರ ಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಯೋಗಿಶ್, ಶ್ಯಾಮಸುಂದರ್, ಹರಿಪ್ರಸಾದ್, ಉಮೇಶ, ಕೆ.ರಾಧಾಕೃಷ್ಣ, ಡಿ.ರಾಧಾಕೃಷ್ಣ, ಪ್ರಶಾಂತ, ವೈಶಾಲಿ, ರಾಕೇಶ್, ರಾಜೇಶ್, ಗಣೇಶ ಇದ್ದರು.