(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.29. ಇಲ್ಲಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲಿನಿಂದ ಮೈಸೂರಿನ ಮೂವರು ನದಿಗೆ ಹಾರಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮಹಿಳೆಯೋರ್ವರನ್ನು ರಕ್ಷಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಮೈಸೂರು ಮೂಲದ ಕವಿತಾ ಮಂದಣ್ಣ (55) ಎಂದು ಗುರುತಿಸಲಾಗಿದೆ. ಈಕೋ ಕಾರಿನಲ್ಲಿ ಶನಿವಾರ ರಾತ್ರಿ ವೇಳೆ ಮೂವರು ತಮ್ಮ ಸಾಕು ನಾಯಿಯೊಂದಿಗೆ ಆಗಮಿಸಿದ್ದು, ಸೇತುವೆಯ ಮಧ್ಯಭಾಗಕ್ಕೆ ಆಗಮಿಸಿ ನದಿಗೆ ಹಾರಿದ್ದಾರೆ. ತಕ್ಷಣವೇ ಸ್ಥಳೀಯರು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿ ನದಿಗೆ ಹಾರಿದವರನ್ನು ರಕ್ಷಿಸಲು ಪ್ರಯತ್ನಿಸಿ ಕವಿತಾ ಮಂದರಣ್ಣರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಕಾರಿನ ನೊಂದಣಿ ಸಂಖ್ಯೆಯ ಅಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಕಾರು ಮೈಸೂರು ಮೂಲದ ವಿರಾಜಪೇಟೆಯ ಕೌಶಿಕ್ ಮಂದಣ್ಣ (ಮೃತ ಮಹಿಳೆಯ ಮಗ) ಎಂಬವರಿಗೆ ಸೇರಿದ್ದು, ಮಹಿಳೆಯು ತನ್ನ ಗಂಡನ ಮರಣದಿಂದ ಜಿಗುಪ್ಸೆಗೊಂಡು ತನ್ನ ಮಕ್ಕಳಾದ ಕೌಶಿಕ್ ಮಂದಣ್ಣ(30) ಮತ್ತು ಕಲ್ಪಿತಾ ಮಂದಣ್ಣ ಎಂಬವರುಗಳೊಂದಿಗೆ ಅತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನದಿಗೆ ಹಾರಿರುವ ಸಂಶಯ ಕಂಡುಬಂದಿದೆ. ಉಳಿದ ಇಬ್ಬರನ್ನು ಪತ್ತೆಹಚ್ಚುವ ಸಲುವಾಗಿ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದವರಿಂದ ಹುಡುಕಾಟ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿರುತ್ತದೆ.