ಮನುಕುಲದ ಶ್ವಾಸಕೋಶ ಅರಣ್ಯ ➤ ಕೋಟಾ ಶ್ರೀನಿವಾಸ್ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.25.ಮನುಷ್ಯನ ಜೀವನ ಉತ್ತಮವಾಗಿರಲು ಪರಿಸರದ ಸಂರಕ್ಷಣೆ ಅಗತ್ಯ. ಮನುಕುಲದ ಶ್ವಾಸಕೋಶವಿರುವುದು ಪರಿಸರದಲ್ಲಿ ಎಂದು ರಾಜ್ಯ ಬಂದರು, ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಮಂಗಳವಾರ ನಗರದ ಪುರಭವನದಲ್ಲಿ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು, ರಾಷ್ಟೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಜಯ ಕರ್ನಾಟಕ ಪತ್ರಿಕೆ, ಅರಣ್ಯ ಇಲಾಖೆ ಮಂಗಳೂರು ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವೃಕ್ಷೋತ್ಸವ 2019 ರ ಉದ್ಘಾಟನೆಯನ್ನು ನಡೆಸಿ ಮಾತನಾಡಿದ ಇವರು, ಪರಿಸರ, ಅರಣ್ಯ ಸಂರಕ್ಷಣೆಗೆ ಸ್ಥಳೀಯರ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರದ ಸಹಕಾರದೊಂದಿಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಮಾನವನ ಬದುಕಿಗೆ ಅಗತ್ಯವಾದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಜಾಗೃತಿ ಅಗತ್ಯವಿದೆ. ಇದರೊಂದಿಗೆ ಜನರ ಸಹಭಾಗಿತ್ವದ ಅಗತ್ಯವಿದೆ. ಕನಾಟಕ ರಾಜ್ಯ ಸರಕಾರ ಪೂರ್ಣವಾಗಿ ಸಹಕಾರ ನೀಡಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ನಗರದ ಹಸಿರೀಕರಣ, ಗಿಡ ನೆಡುವುದರ ಜೊತೆಗೆ ಅವುಗಳ ಪೋಷಣೆಯೂ ಮುಖ್ಯ. ಶೀಘ್ರವೇ ನಗರದಲ್ಲಿ ‘ನಗರ ಅರಣ್ಯ ಯೋಜನೆ’ಯನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಯೋಜನೆಯ ಪ್ರಕಾರ ನಗರದ ಆಯ್ದ ಪ್ರದೇಶಗಳಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿ ಅರಣ್ಯ ಬೆಳೆಸುವ ಚಿಂತನೆ ಇದೆ.

Also Read  ಕನ್ನಡ ಪುಸ್ತಕ ಪ್ರಾಧಿಕಾರ ➤ ಜಾಣ ಜಾಣೆಯರ ಬಳಗ ರಚಿಸಲು ಅರ್ಜಿ ಆಹ್ವಾನ

ಅದೇ ರೀತಿ ಸಾರ್ವಜನಿಕರು ನೀರು ಇಂಗಿಸುವ ಕೆಲಸ, ಹಿತ್ತಲಲ್ಲಿ ಗಿಡ ನೆಡುವುದನ್ನು ಕಡ್ಡಾಯ ಮಾಡಬೇಕಾಗಿದೆ ಎಂದರು.ನಗರೀಕರಣ ಹೆಸರಿನಲ್ಲಿ ನೈಸರ್ಗಿಕತೆಯನ್ನು ಮರೆತು ಅನೈಸರ್ಗಿಕತೆಯ ಮೊರೆ ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ನಗರೀಕರಣದ ಪರಿಣಾಮ ತುಂಬಾ ದುಬಾರಿಯಾಗಿ ಪರಿಣಮಿಸಬಹುದು. ಆದುದರಿಂದ ಮುಂದಿನ ಪೀಳಿಗೆಯ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ಪರಿಸರ ಸಂರಕ್ಷಣೆ ನಡೆಸಬೇಕು. ಮರಗಳನ್ನು ಬೆಳೆಸುವುದರ ಜೊತೆಗೆ ಪೋಷಣೆ ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಏಕಗಮ್ಯಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ವೃಕ್ಷೋತ್ಸವದ ಸಂದೇಶ ನೀಡಿದರು.

Also Read  ಕರ್ನಾಟಕದಲ್ಲಿ ಲಾಕ್​ಡೌನ್ ವಿಸ್ತರಣೆ ಕುರಿತು ಸಿಎಂ ಮಹತ್ವದ ಸಭೆ.?!

ಈ ಸಂಧರ್ಭದಲ್ಲಿ ಅರಣ್ಯ ಇಲಾಖೆ ಮಂಗಳೂರು ವಿಭಾಗ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಉಸಿರಿಗಾಗಿ ಹಸಿರು, ನೀರಿಗಾಗಿ ಅರಣ್ಯ ಕ್ವಿಜ್ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು .ಸಮಾರಂಭದಲ್ಲಿ ಅತಿಥಿಗಳಾಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಜಿ ಗಂಗಾಧರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top