ಮೂಲಭೂತ ಸೌಕರ್ಯ ವಂಚಿತ ರಾಜ್ಯದಲ್ಲೇ ನಂ.1 ಆದರ್ಶ ಗ್ರಾಮ ಬಳ್ಪ ➤ ರೋಗಿಯನ್ನು ಮರದ ಕುರ್ಚಿಯಲ್ಲಿ ಹೊತ್ತುಕೊಂಡೇ ಕಿ.ಮಿ. ದೂರ ಸಾಗಾಟ ➤ ಕಡತದ ಅಭಿವೃದ್ಧಿಗೆ ಸಾಕ್ಷಿಯಾಗಿ ಕತ್ತಲಲ್ಲೇ ಕಳೆಯುತ್ತಿರುವ ಹಲವು ಕುಟುಂಬ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.23. ಬುದ್ಧಿವಂತರ ಜಿಲ್ಲೆಯ ನಂ.1 ಸಂಸದರ ಆದರ್ಶ ಗ್ರಾಮವು ಹೆಸರಿಗಷ್ಟೇ ಆದರ್ಶವಾಗಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ.

ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪ ಗ್ರಾಮವು
ರಾಜ್ಯದಲ್ಲೇ ನಂಬರ್.1 ಗ್ರಾಮ ಎಂಬ ಹೆಸರನ್ನು ಪಡೆದುಕೊಂಡಿದೆ. ಕಳೆದ ಐದು ವರ್ಷಗಳಿಂದ ಅಲ್ಲೊಂದು – ಇಲ್ಲೊಂದು ಕಾಮಗಾರಿ ನಡೆದಿದೆಯೆನ್ನುವುದನ್ನು ಬಿಟ್ಟರೆ ಉಳಿದೆಲ್ಲಾ ಕಾಮಗಾರಿಗಳು ಫೋಟೊದಲ್ಲಿ ಮಾತ್ರ ನಡೆದಿದೆಯೆನ್ನುವುದು ಊರವರ ಆರೋಪ. ಅದಕ್ಕೆ ಪೂರಕವೆಂಬಂತೆ ಬಳ್ಪ ಗ್ರಾಮದ ಪಡ್ಕಿಲ್ಲಾಯ ನಿವಾಸಿ ರಾಮಣ್ಣ ಪೂಜಾರಿ ಎಂಬವರು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ಅವರನ್ನು ತುರ್ತು ಚಿಕಿತ್ಸೆಗಾಗಿ ಅಕ್ಕಪಕ್ಕದ ಮನೆಯವರು ಮರದ ಕುರ್ಚಿಯಲ್ಲಿ ಎತ್ತಿಕೊಂಡು ಸುಮಾರು 1 ಕಿಮೀ ದೂರದವರೆಗೆ ಕರೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನೊಂದೆಡೆ ಸಂಸದರ ಆದರ್ಶ ಗ್ರಾಮದ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರ್ಶ ಗ್ರಾಮ ಯೋಜನೆಯಡಿ ಜನ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಹೇಳಲಾಯಿತಾದರೂ ಅದು ಕಡತದಲ್ಲಿ ಮಾತ್ರ ಎನ್ನುವುದು ವಿಪರ್ಯಾಸ. ಆದರ್ಶ ಗ್ರಾಮ ಯೋಜನೆಯಲ್ಲಿ ರಾಜ್ಯದಲ್ಲೇ ನಂ.1 ಗ್ರಾಮವೇ ಅಭಿವೃದ್ಧಿಯಲ್ಲಿ ಹಿಂದಿದೆ ಎನ್ನುವುದಾದರೆ ಉಳಿದ ಜಿಲ್ಲೆಗಳ ಅವಸ್ಥೆ ಹೇಗಿರಬಹುದೆಂದು ಅವಲೋಕನ ಮಾಡಬೇಕಾಗಿದೆ.

Also Read  ಮಂಗಳೂರು: ಡಾ.ಕುಮಾರ್ ರವರು ಉತ್ತಮ  ಚಟುವಟಿಕೆ ನಡೆಸಿದ ಪ್ರಶಸ್ತಿಗೆ ಆಯ್ಕೆ

ಬಳ್ಪ ಗ್ರಾಮದ ಕಾಂಜಿ, ಪಡ್ಕಿಲಾಯ ಭಾಗದಲ್ಲಿ ರಸ್ತೆ ಸಂಪರ್ಕವಿಲ್ಲದೆ ಇರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಮಳೆಗಾಲದಲ್ಲಿ ಪಾನ, ಕಾಂಜಿ, ಪಡ್ಕಿಲಾಯ ಭಾಗದ ರಸ್ತೆಯ ಸಂಪರ್ಕ ಕಡಿತಗೊಳ್ಳುತ್ತಿದ್ದು , ಇದರಿಂದ ತೀವ್ರ ಬೇಸತ್ತಿರುವ ಈ ಭಾಗದ ಜನತೆ ವ್ಯವಸ್ಥಿತ ರಸ್ತೆ ಸಂಪರ್ಕ ಕೊಡಿಸಲು ಸಂಬಂಧಿಸಿದ ಜನಪ್ರತಿನಿಧಿಗಳನ್ನು, ಶಾಸಕರನ್ನು ಹಾಗೂ ಸಂಸದರನ್ನು ಆಗ್ರಹಿಸಿದ್ದಾರೆ.

Also Read  ಕೊಕ್ಕಡ: ಯುವತಿ ನಾಪತ್ತೆ

error: Content is protected !!
Scroll to Top