(ನ್ಯೂಸ್ ಕಡಬ) newskadaba.com ಕೊಂಬಾರು,ಸಪ್ಟೆಂಬರ್.23. ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ ಎಂಬವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಮಾನುಷವಾಗಿ ಮಾರಾಣಾಂತಿವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ನಾಗರಿಕರು ಕೆಂಜಾಲದಲ್ಲಿ ಅರಣ್ಯ ಇಲಾಖಾ ಕಛೇರಿಯ ಎದರು ಶನಿವಾರ ಪ್ರತಿಭಟನೆ ನಡೆಸಿದರು.
ಕೆಂಜಾಳದ ನಾಗರಿಕರು ಹಾಗೂ ನೀತಿ ತಂಡದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗ್ಗೆ 10.30ರಿಂದ ಪ್ರತಿಭಟನೆ ಪ್ರಾರಂಭವಾದರೂ ಮಧ್ಯಾಹ್ನದವರೆಗೆ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಯಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಿದ ಬೆನ್ನಲ್ಲೆ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಅವರು ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರು.
ಎಸ್‍ಡಿಪಿಐ ಜಿಲ್ಲಾ ಸಮಿತಿಯ ಸದಸ್ಯ ಆನಂದ ಮಿತ್ತಬೈಲ್ ಮಾತನಾಡಿ ಕೊಂಬಾರು ಮೀಸಲು ಅರಣ್ಯದಲ್ಲಿ ಮರ ಕಳ್ಳತನ ನಡೆಸಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಲೋಕೇಶ್ ಅವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಅರಣ್ಯ ಪಾಲಕ ಅಶೋಕ್, ಪ್ರಕಾಶ್ ಹಾಗೂ ಸಿಬ್ಬಂದಿ ಶೀನಪ್ಪ ಎಂಬವರು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ, ಲೋಕೇಶ್ ಅವರು ಕಾರ್ಯಕ್ರಮಕ್ಕೆ ತನ್ನ ಕುಟುಂಬದವರೊಂದಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ಕೊಲ್ಲಮೊಗ್ರು ಅರಣ್ಯ ಇಲಾಖೆಯ ಕಛೇರಿಯಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ಥಳಿಸಿದ್ದಾರೆ, ಯಾವುದೇ ತಪ್ಪು ಮಾಡದ ಲೋಕೇಶ್ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ದಂಡ ಪಡೆದುಕೊಳ್ಳಲಾಗಿದೆ, ಇದರ ಹಿಂದೆ ಅರಣ್ಯ ಇಲಾಖೆಯವರು ತಾವು ನಡೆಸಿದ ಹಗರಣವನ್ನು ಮುಚ್ಚಿ ಹಾಕಲು ಈ ಷಡ್ಯಂತ್ರ ರೂಪಿಸಿ ಮರಗಳ್ಳತನ ಮಾಡಿರುವುದಾಗಿ ಲೋಕೇಶ್ ಅವರಿಂದ ತಪ್ಪೊಪ್ಪಿಗೆ ಪಡೆದುಕೊಳ್ಲಲಾಗಿದೆ.
ಸರಿಯಾಗಿ ತನಿಖೆ ಮಾಡದೆ ಈ ರೀತಿ ಅರಣ್ಯ ಅಧಿಕಾರಿಗಳು ವರ್ತಿಸಿರುವುದು ಅಕ್ಷಮ್ಯ ಅಪರಾಧವಾಗಿದೆ, ಈ ಸಿಬ್ಬಂದಿಗಳನ್ನು ಅಮಾನತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ನೀತಿ ಟ್ರಸ್ಟ್‍ನ ಜಯನ್ ಅವರು ಮಾತನಾಡಿ, ಲೋಕೇಶ್ ಅವರು ತಪ್ಪು ಮಾಡಲಿಲ್ಲ, ಒಂದು ವೇಳೆ ತಪ್ಪು ಮಾಡಿದ ಆರೋಪಿಯನ್ನು ಕಾನೂನಿನ ಪ್ರಕಾರವೇ ಬಂಧಿಸಿ, ಕೇಸು ಮಾಡಬಹುದಾಗಿದೆ, ಆದರೆ ಇಲ್ಲಿ ಅರಣ್ಯಾಧಿಕಾರಿ ಗೂಂಡಗಳಂತೆ ವರ್ತಿಸಿ ತನ್ನ ಹೇಯ ಕೃತ್ಯವನ್ನು ಪ್ರದರ್ಶಿಸಿದ್ದಾರೆ. ಅರಣ್ಯ ಇಲಾಖೆಯನ್ನು ಲೂಟಿ ಮಾಡುವ ಅರಣ್ಯ ಇಲಾಖೆಯವರು ತಮ್ಮ ತಪ್ಪನ್ನು ಅಡಗಿಸಲು ಈ ಬಡಪಾಯಿ ನಿರಾಪರಾಧಿ ಲೋಕೇಶ್ ಅವರಿಗೆ ಹಲ್ಲೆ ನಡೆಸಿ ಕೇಸು ದಾಖಲಿಸಲಾಗಿದೆ ಈ ಬಗ್ಗೆ ಈಗಾಗಲೇ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗಿದೆ ಎಂದರು. ಕೊಂಬಾರು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಶಶಿಧರ ಬೊಟ್ಟಡ್ಕ ಮಾತನಾಡಿ ಘಟನೆಯನ್ನು ಖಂಡಿಸಿ ಮುಂದೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಸೋಮವಾರ ಸುಬ್ರಹ್ಮಣ್ಯ ಅರಣ್ಯ ಕಛೇರಿ ಎದುರು ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಲಾಯಿತು.ತಾ.ಪಂ. ಗಣೇಶ್ ಕೈಕುರೆ, ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಪರಮೇಶ್ವರ ಗೌಡ ಉರುಂಬಿ ಮೊದಲಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಕಾರ್ತಿಕ್ ಕೊಂಬಾರು, ವಿನೋದ್ ಹೊಳ್ಳಾರು, ಗೋಪಾಲಕೃಷ್ಣ ಮರುವಂಜಿ, ಚಂದ್ರಶೇಖರ ಕೊಡೆಂಕಿರಿ, ಹರೀಶ್ ಗುಡ್ಡೆಕೇರಿ, ವಿಶ್ವನಾಥ ಕಾಪಾರು, ಕೊರಗ್ಗು ಕೊಲ್ಕಜೆ, ಮೋನಪ್ಪ ಸರಪಾಡಿ, ಜನಾರ್ಧನ ಕೊಡೆಂಕಿರಿ, ಕಿರಣ ಕೊಡೆಂಕಿರಿ, ವಿಶ್ವನಾಥ ಪೆರುಂದೊಡಿ, ಪ್ರಶಾಂತ್ ಹೊಳ್ಳಾರು, ಪ್ರವೀಣ್ ಹೊಳ್ಳಾರು, ಹರೀಶ್ ಭಾಗ್ಯ, ದಿವಾಕರ ಕೊಡೆಂಕಿರಿ ಉಪಸ್ಥಿತರಿದ್ದರು. ರಾಮಕೃಷ್ಣ ಹೊಳ್ಳಾರು ಕಾರ್ಯಕ್ರಮ ನಿರೂಪಿಸಿದರು, ಮೂರು ಗಂಟೆ ಪ್ರತಿಭಟನೆ ನಡೆಸಿದ ಬಳಿಕ ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಅವರಿಗೆ ಮನವಿ ಸಲ್ಲಿಸಲಾಯಿತು.
ಅರಣ್ಯ ವೀಕ್ಷಕ-ರಕ್ಷಕ ಸಂಘದಿಂದ ಕಡಬ ಪೋಲಿಸರಿಗೆ ಮನವಿ
ಈ ಮಧ್ಯೆ ಅರಣ್ಯ ವೀಕ್ಷಕರು-ರಕ್ಷಕರ ಸಂಘದ ವತಿಯಿಂದ ಸುಮಾರು 35 ಸಿಬಂದಿಗಳು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ನಮಗೆ ರಕ್ಷಣೆ ನೀಡಬೇಕೆಂಬ ಮನವಿಯನ್ನು ಕಡಬ ಪೋಲಿಸ್ ಠಾಣೆಗೆ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಎನ್. ಅವರ ನೇತೃತ್ವದಲ್ಲಿ ನೀಡಲಾಯಿತು.