ಅಮಾಯಕ ಯುವಕನಿಗೆ ಅರಣ್ಯಾಧಿಕಾರಿಗಳಿಂದ ಹಲ್ಲೆ ಆರೋಪ ➤ ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಕೆಂಜಾಳದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ ಎಂಬವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಮಾನುಷವಾಗಿ ಮಾರಾಣಾಂತಿವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿರುವ ಅಲ್ಲಿನ ನಾಗರಿಕರು, ಹಲ್ಲೆ ನಡೆಸಿದ ಇಲಾಖಾ ಸಿಬ್ಬಂದಿಗಳನ್ನು ವಾರದೊಳಗೆ ಅಮಾನತು ಮಾಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರದಂದು ಕೆಂಜಾಳ ಅರಣ್ಯ ಇಲಾಖೆಯ ಕಛೇರಿಯ ಎದುರು ಕೆಂಜಾಳದ ನಾಗರಿಕರು ಹಾಗೂ ನೀತಿ ತಂಡದ ಸದಸ್ಯರು ಪ್ರತಿಭಟನೆ ನಡೆಸಿದರು. ಮಧ್ಯಾಹ್ನದವರೆಗೆ ಯಾವ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ, ಈ ಸಂದರ್ಭದಲ್ಲಿ ಪ್ರತಿಭಟನೆಕಾರರು ರಸ್ತೆ ತಡೆಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಅವರು ಆಗಮಿಸಿ ಪ್ರತಿಭಟನೆ ನಿರತರಿಂದ ಮನವಿ ಸ್ವೀಕರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆನಂದ ಮಿತ್ತಬೈಲ್ ಅವರು, ಕೊಂಬಾರು ಮೀಸಲು ಅರಣ್ಯದಲ್ಲಿ ಮರ ಕಳ್ಳತನ ನಡೆಸಿದ ಬಗ್ಗೆ ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ್ ಎಂಬವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಅರಣ್ಯ ಪಾಲಕ ಅಶೋಕ್, ಪ್ರಕಾಶ್ ಹಾಗೂ ಸಿಬ್ಬಂದಿ ಶೀನಪ್ಪ ಎಂಬವರು ಅಮಾನುಷವಾಗಿ ಮಾರಾಣಾಂತಿಕ ಹಲ್ಲೆ ನಡೆಸಿದ್ದು, ಇದು ಅಕ್ಷಮ್ಯ ಅಪರಾಧ. ಲೋಕೇಶ್ ಅವರು ಕಾರ್ಯಕ್ರಮಕ್ಕೆ ತನ್ನ ಕುಟುಂಬದವರೊಂದಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಅರಣ್ಯಾಧಿಕಾರಿಗಳು ರಸ್ತೆಯಲ್ಲಿ ವಶಕ್ಕೆ ತೆಗೆದುಕೊಂಡು ಕೊಲ್ಲಮೊಗ್ರು ಅರಣ್ಯ ಇಲಾಖೆಯ ಕಛೇರಿಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಆದರೆ ಇಲ್ಲಿ ಇಲಾಖೆಯ ಅಧಿಕಾರಿಗಳು ಅಮಾಯಕ ನಿರಾಪರಾಧಿಯೋರ್ವನಿಗೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗುತ್ತಿದೆ. ನಿಜವಾಗಿಯೂ ಆ ಮರ ಕಳ್ಳತನ ನಡೆಸದ ಲೋಕೇಶ್ ಅವರನ್ನು ಅನಾವಶ್ಯಕವಾಗಿ ಪ್ರಕರಣದಲ್ಲಿ ಸಿಲುಕಿಸಿ ಕೇಸು ದಾಖಲಿಸಿ ದಂಡ ಪಡೆದುಕೊಳ್ಳಲಾಗಿದೆ. ಅರಣ್ಯ ಇಲಾಖೆಯವರು ತಾವು ನಡೆಸಿದ ಹಗರಣವನ್ನು ಮುಚ್ಚಿ ಹಾಕಲು ಈ ಷಡ್ಯಂತ್ರ ರೂಪಿಸಿ ಲೋಕೇಶ್ ಅವರಿಗೆ ಬೆದರಿಕೆ ಒಡ್ಡಿ ಮರ ಕಳ್ಳತನ ನಡೆಸಿದ್ದೇನೆ ಎಂದು ಒಪ್ಪಿಗೆ ಪಡೆಯಲಾಗಿದೆ. ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದೆ ಈ ರೀತಿ ಅರಣ್ಯ ಅಧಿಕಾರಿಗಳು ವರ್ತಿಸಿರುವುದು ಅಕ್ಷಮ್ಯ ಅಪರಾಧವಾಗಿದೆ, ಈ ಸಿಬ್ಬಂದಿಗಳನ್ನು ಅಮಾನತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.

Also Read  ವಿಟ್ಲದಲ್ಲಿ ಗಾಂಜಾ ಸಹಿತ ಓರ್ವನ ಬಂಧನ ➤ ಮತ್ತೋರ್ವ ಎಸ್ಕೇಪ್.!

ನೀತಿ ಟ್ರಸ್ಟ್‌ನ ರಾಜ್ಯಾಧ್ಯಕ್ಷ ಜಯನ್ ಅವರು ಮಾತನಾಡಿ, ಲೋಕೇಶ್ ಅವರು ತಪ್ಪು ಮಾಡಲಿಲ್ಲ, ಒಂದು ವೇಳೆ ತಪ್ಪು ಮಾಡಿದ ಆರೋಪಿಯನ್ನು ಕಾನೂನಿನ ಪ್ರಕಾರವೇ ಬಂಧಿಸಿ, ಕೇಸು ಮಾಡಬಹುದಾಗಿದೆ. ಆದರೆ ಇಲ್ಲಿ ಅರಣ್ಯಾಧಿಕಾರಿ ಗೂಂಡಗಳಂತೆ ವರ್ತಿಸಿ ತನ್ನ ಹೇಯ ಕೃತ್ಯವನ್ನು ಪ್ರದರ್ಶಿಸಿದ್ದಾರೆ. ಅರಣ್ಯ ಇಲಾಖೆಯನ್ನು ಲೂಟಿ ಮಾಡುವ ಅರಣ್ಯ ಇಲಾಖೆಯವರು ತಮ್ಮ ತಪ್ಪನ್ನು ಅಡಗಿಸಲು ಈ ಬಡಪಾಯಿ ನಿರಪರಾಧಿ ಲೋಕೇಶ್ ಅವರಿಗೆ ಹಲ್ಲೆ ನಡೆಸಿ ಕೇಸು ದಾಖಲಿಸಿದ್ದಾರೆ. ಜನರಿಗೆ ರಕ್ಷಣೆ ನೀಡಿ ಅರಣ್ಯ ರಕ್ಷಿಸಬೇಕಾದ ಇಲಾಖೆಯ ಅಧಿಕಾರಿಗಳು ಈ ಕೃತ್ಯ ಎಸಗಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ನಮ್ಮ ತೆರಿಗೆ ಹಣದಿಂದ ಸಂಬಳ ಪಡೆಯುವ ಇವರು ಜನತೆಗೆ ಅನ್ಯಾಯ ಎಸಗುತ್ತಿದ್ದಾರೆ‌ ಈ ಬಗ್ಗೆ ಈಗಾಗಲೇ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗಿದೆ. ಈ ಹಲ್ಲೆ ನಡೆಸಿದ ಇಲಾಖೆಯ ಪರವಾಗಿ ಓರ್ವ ಜಿ.ಪಂ. ಸದಸ್ಯರು ಕೂಡ ಅವರ ಬೆಂಬಲಕ್ಕೆ ನಿಂತಿರುವುದು ನಾಚಿಕೇಡಿನ ಸಂಗತಿ ಎಲ್ಲವನ್ನು ಬಯಲಿಗೆಲೆದು ಹಲ್ಲೆ ನಡೆಸಿದ ಮೂವರನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕೊಂಬಾರು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಶಶಿಧರ ಬೊಟ್ಟಡ್ಕ ಮಾತನಾಡಿ, ಅರಣ್ಯ ಅಧಿಕಾರಿಗಳು ಯಾವ ಆಧಾರದಲ್ಲಿ ಲೋಕೇಶ್ ಅವರನ್ನು ಬಂಧಿಸಿದ್ದಾರೆ ಮತ್ತು ಅವರನ್ನು ಮರ ಸಮೇತ ಬಂದಿಸಿದ್ದಾರೆಯೇ..? ಅಥಾವ ಅವರು ಮರ ಸಾಗಾಟ ಮಾಡುವುದನ್ನು ನೋಡಿದ್ದಾರೆಯೇ, ವಿನಾ ಕಾರಣ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅರಣ್ಯ ಅಧಿಕಾರಿಗಳು ಅಮಾಯಕನ ಮೇಲೆ ಈ ಹೇಯ ಕೃತ್ಯ ಎಸಗಿದ್ದಾರೆ ಇದು ಖಂಡನೀಯ. ಈ ಮರ ಕಳ್ಳತನ ಪ್ರಕರಣದಲ್ಲಿ ಇಲಾಖೆಯ ಸಿಬ್ಬಂದಿಗಳೇ ಶಾಮೀಲು ಆಗಿರುವುದು ಇಡೀ ಊರಿಗೆ ಗೊತ್ತಿದೆ, ಅದನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿ ಹಲ್ಲೆ ನಡೆಸಿದ ಸಿಬ್ಬಂದಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

Also Read  ಯುವ ಬ್ರಿಗೇಡ್ ಸುಬ್ರಹ್ಮಣ್ಯ ವತಿಯಿಂದ ಸ್ವಚ್ಚತಾ ಕಾರ್ಯ

ತಾ.ಪಂ. ಸದಸ್ಯ ಗಣೇಶ್ ಕೈಕುರೆ ಮಾತನಾಡಿ ಅಧಿಕಾರಿಗಳು ಹಿಟ್ಲರ್ ಸಂಸ್ಕೃತಿಯಂತೆ ವರ್ತಿಸುತ್ತಿರುವುದು ಖಂಡನೀಯ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ ಅಮಾಯಕರಿಗೆ ಶಿಕ್ಷೆ ನೀಡುವುದು ಸರಿಯಲ್ಲ ಎಂದು ಹೇಳಿದರು. ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಪರಮೇಶ್ವರ ಗೌಡ ಉರುಂಬಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಕಾರ್ತಿಕ್ ಕೊಂಬಾರು, ವಿನೋದ್ ಹೊಳ್ಳಾರು, ಗೋಪಾಲಕೃಷ್ಣ ಮರುವಂಜಿ, ಚಂದ್ರಶೇಖರ ಕೊಡೆಂಕಿರಿ, ಹರೀಶ್ ಗುಡ್ಡೆಕೇರಿ, ವಿಶ್ವನಾಥ ಕಾಪಾರು, ಕೊರಗ್ಗು ಕೊಲ್ಕಜೆ, ಮೋನಪ್ಪ ಸರಪಾಡಿ, ಜನಾರ್ಧನ ಕೊಡೆಂಕಿರಿ, ಕಿರಣ ಕೊಡೆಂಕಿರಿ, ವಿಶ್ವನಾಥ ಪೆರುಂದೊಡಿ, ಪ್ರಶಾಂತ್ ಹೊಳ್ಳಾರು, ದಯಾನಂದ ಮಿತ್ತಬೈಲ್, ಪ್ರವೀಣ್ ಹೊಳ್ಳಾರು ಹರೀಶ್ ಭಾಗ್ಯ, ದಿವಾಕರ ಕೊಡೆಂಕಿರಿ ಮೊದಲಾದವರು ಭಾಗವಹಿಸಿದ್ದರು. ರಾಮಕೃಷ್ಣ ಹೊಳ್ಳಾರು ಕಾರ್ಯಕ್ರಮ ನಿರೂಪಿಸಿದರು.

ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆದರೂ ಸ್ಥಳಕ್ಕೆ ಅರಣ್ಯ ಇಲಾಖೆಯ ಯಾವ ಅಧಿಕಾರಿಯೂ ಬಾರದ ಹಿನ್ನಲೆಯಲ್ಲಿ ಅಸಮಾಧಾನಗೊಂಡ ಪ್ರತಿಭಟನಾಕಾರು ಗುಂಡ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆ ನಡೆಸುವುದಾಗಿ ಪೋಲಿಸರಲ್ಲಿ ತಿಳಿಸಿದರು, ಇದಕ್ಕೆ ಪೋಲಿಸರು ಒಪ್ಪದಿದ್ದರೂ ರಸ್ತೆ ತಡೆ ಮಾಡುವುದಾಗಿ ಘೋಷಿಸಿದರು, ಇದಾಗ ಬಳಿಕ ಸ್ವಲ್ಪ ಹೊತ್ತಿನಲ್ಲಿ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಅವರು ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

Also Read  ಸುಬ್ರಹ್ಮಣ್ಯ: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ

ಹಲ್ಲೆ ನಡೆಸಿದ ಇಲಾಖೆಯ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡದಿದ್ದರೆ ಸೆ.30ರಂದು ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿಯವರ ಕಛೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು.

error: Content is protected !!
Scroll to Top