(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.18. ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೋರ್ವರ ಮೃತದೇಹವು ಮನೆಯ ಒಳಗಡೆ ಕೊಳೆತ ಸ್ಥಿತಿಯಲ್ಲಿ ಬುಧವಾರ ಸಂಜೆ ಪುತ್ತೂರಿನ ಪಾಂಗಳಾಯಿ ಎಂಬಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಪಾಂಗಳಾಯಿ ನಿವಾಸಿ ದಿ. ಬಾಬು ಬಂಗೇರ ಎಂಬವರ ಪುತ್ರ ಚಂದ್ರಶೇಖರ್(57) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಟೈಲರ್ ಆಗಿದ್ದ ಚಂದ್ರಶೇಖರ್ ಅವಿವಾಹಿತರಾಗಿದ್ದು, ಕಳೆದ ಕೆಲವು ವರ್ಷಗಳಿಂದ ವೃತ್ತಿಯನ್ನು ಬಿಟ್ಟು ತಮ್ಮ ಮೂಲ ಮನೆಯಲ್ಲಿ ಏಕಾಂಗಿಯಾಗಿಯೇ ಇದ್ದರು. ಮನೆಯಿಂದ ಹೊರಬರದ ಅವರು ಯಾವುದೇ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದೆ ಮನೆಯಲ್ಲಿಯೇ ಇರುತ್ತಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ಮನೆಯ ಸುತ್ತ ವಾಸನೆ ಬರುತ್ತಿದ್ದುದರಿಂದ ಪಕ್ಕದ ಮನೆಯವರು ಅನುಮಾನದಿಂದ ಕಿಟಕಿಯ ಮೂಲಕ ಇಣುಕಿ ನೋಡಿದಾಗ ನೆಲದ ಮೇಲೆ ಕೊಳೆತ ಸ್ಥಿತಿಯಲ್ಲಿ ಮೃತದೇಹವು ಕಂಡುಬಂದಿದೆ. ಬಳಿಕ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ನಗರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.