ಡಿಕೆಶಿ ಬಂಧನ ಖಂಡಿಸಿ ಕಡಬ ತಾಲೂಕು ಒಕ್ಕಲಿಗ ಸಮುದಾಯ ಮತ್ತು ಜಾತ್ಯಾತೀತ ಅಭಿಮಾನಿ ಬಳಗದಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.12. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಕಡಬ ತಾಲೂಕು ಒಕ್ಕಲಿಗ ಸಮುದಾಯ ಮತ್ತು ಜಾತ್ಯಾತೀತ ಅಭಿಮಾನಿ ಬಳಗದವರಿಂದ ಕಡಬದಲ್ಲಿ ಗುರುವಾರ ಸಂಜೆ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು ರಾಜ್ಯದ ಒಬ್ಬ ಧೀಮಂತ ನಾಯಕರನ್ನು ಬಂಧಿಸಿ ಒಕ್ಕಲಿಗ ಸಮುದಾಯವನ್ನು ಕೆಣಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೇಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಬೇಕಾದಷ್ಟು ಜನ ಭ್ರಷ್ಟರಿದ್ದರೂ ಅವರ ವಿರುದ್ಧ ಕ್ರಮ ಜರಗಿಸುವುದಿಲ್ಲ. ಅಹಮ್ಮದ್ ಪಟೇಲ್ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ಮಾಡುವಾಗ ಶಾಸಕರನ್ನು ರಕ್ಷಣೆ ಮಾಡಿದ ಏಕೈಕ ಕಾರಣಕ್ಕಾಗಿ ಡಿಕೆಶಿಯವರ ಮೇಲೆ ದ್ವೇಷ ಸಾಧಿಸಲಾಗುತ್ತಿದೆ. ಕೇಂದ್ರ ಸರಕಾರದ ವಿರುದ್ಧ ಯಾರೆಲ್ಲಾ ಮಾತನಾಡುತ್ತಾರೋ ಅವರನ್ನೂ ಜೈಲಿಗಟ್ಟುವ ಕೆಲಸ ಮಾಡಲಾಗುತ್ತಿದೆ. ಡಿಕೆಶಿಯವರ ಅವಿವಾಹಿತ ಪುತ್ರಿಯನ್ನು ಕೂಡಾ ವಿಚಾರಣೆಗೆ ಒಳಪಡಿಸಿ ಜೈಲಿಗಟ್ಟುವ ಹುನ್ನಾರ ನಡೆಸುತ್ತಿದ್ದಾರೆ. ಹೆಣ್ಣುಮಗಳ ಕಣ್ಣೀರಿನ ಶಾಪ ಮೋದಿ ಹಾಗೂ ಅಮಿತ್ ಷಾ ಅವರಿಗೆ ತಟ್ಟದೆ ಇರಲಾರದು. ಈಗ ಬಿಜೆಪಿಯವರು ಮೆರೆಯುತ್ತಿದ್ದಾರೆ. ಆರು ತಿಂಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಸರಕಾರ ಬಿದ್ದು ಹೋಗಿ ಡಿಕೆಶಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

Also Read  ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ

ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಕಾಂಗ್ರೇಸ್ ಮುಖಂಡರಾದ ಎಂ.ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಪಿ.ಪಿ.ವರ್ಗೀಸ್, ಜೆಡಿಎಸ್ ಮುಖಂಡರಾದ ಸಯ್ಯದ್ ಮೀರಾ ಸಾಹೇಬ್, ಜಾಕೆ ಮಾಧವ ಗೌಡ ಮತ್ತಿತರರು ಮಾತಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ, ಪ್ರಮುಖರಾದ ಅಶೋಕ್ ನೆಕ್ರಾಜೆ, ಫಝಲ್ ಕೋಡಿಂಬಾಳ, ಬಾಬು ಮುಗೇರ, ಸೈಮನ್ ಸಿ.ಜೆ, ತಿಲಕ್ ಸುಬ್ರಹ್ಮಣ್ಯ, ಕಾರ್ಯಕ್ರಮದ ಸಂಘಟಕರಾದ ಚಂದ್ರಶೇಖರ ಗೌಡ ಕೋಡಿಬೈಲು, ಜನಾರ್ಧನ ಗೌಡ ಪಣೆಮಜಲು, ಶಿವರಾಮ ಎಂ.ಎಸ್, ಹರಿಪ್ರಸಾದ್ ಎನ್ಕಾಜೆ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಕೈಕುರೆ ಸ್ವಾಗತಿಸಿದರು. ಕಾಂಗ್ರೇಸ್ ಮುಖಂಡ ಬಾಲಕೃಷ್ಣ ಗೌಡ ಬಳ್ಳೇರಿ ವಂದಿಸಿದರು.

Also Read  ಅಡ್ಕಾರ್: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ

Gems

ಕಡಬದ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರು ಹಾಗೂ ಇತರ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಮಾತನಾಡಿದ ಕಾಂಗ್ರೇಸ್ ಮುಖಂಡ ಎಂ.ವೆಂಕಪ್ಪ ಗೌಡ, ಆ ರೀತಿ ಹೇಳಿಕೆ ನೀಡಲು ನಿಮಗೆ ನಾಚಿಕೆಯಾಗಬೇಕು. ಅವರು ಅಧಿಕೃತ ಅಧ್ಯಕ್ಷರೋ ಅಥವಾ ಅನಧಿಕೃತ ಅಧ್ಯಕ್ಷರೋ ಎಂದು ಗೊತ್ತಿಲ್ಲ. ಸುಳ್ಯ ಗೌಡ ಸಮುದಾಯ ಭವನಕ್ಕೆ ಐವತ್ತು ಲಕ್ಷ ರೂ. ಅನುದಾನ ನೀಡಿದ ಧೀಮಂತ ನಾಯಕ ಡಿಕೆಶಿ ಅವರ ಋಣ ಒಕ್ಕಲಿಗ ಸಮುದಾಯದ ಮೇಲೆ ಇದೆ. ಆದ್ದರಿಂದ ಎಲ್ಲಾ ಒಕ್ಕಲಿಗ ಸಮುದಾಯದವರು ಒಟ್ಟಾಗಿ ಪ್ರತಿಭಟಿಸಬೇಕಾಗಿದೆ ಎಂದರು.

error: Content is protected !!
Scroll to Top