(ನ್ಯೂಸ್ ಕಡಬ) newskadaba.com ಕಡಬ, ಆ.31. ಅಮಾಯಕರನ್ನು ಭಯೋತ್ಪಾದಕರೆಂಬಂತೆ ಬಿಂಬಿಸಿ ಕೆಲ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ ಎಂದು ಆರೋಪಿಸಿ ದ.ಕ.ಜಿಲ್ಲಾ ಎಸ್‌ಕೆಎಸ್ಸೆಸ್ಸೆಫ್ ಸಮಿತಿಯ ನಿರ್ದೇಶನದಂತೆ ಎಸ್‌ಕೆಎಸ್ಸೆಸ್ಸೆಫ್ ಕಡಬ ವಲಯದ ವತಿಯಿಂದ ಶುಕ್ರವಾರ ಸಂಜೆ ಕಡಬ ಪಂಚಾಯತ್ ವಾಣಿಜ್ಯ ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮ ರಂಗವು ದೇಶದ ಹಿತಕ್ಕಾಗಿ, ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಆದರೆ ಕೆಲವು ದಿನಗಳ ಹಿಂದೆ ಕೆಲವೊಂದು ಮಾಧ್ಯಮಗಳು ಅಮಾಯಕರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಹೊರಿಸಿ ವರದಿ ಬಿತ್ತರಿಸಿದ್ದು, ನಿಜಾಂಶವನ್ನು ತಿಳಿಯದೆ ಸತ್ಯಕ್ಕೆ ದೂರವಾದ ವರದಿ ಬಿತ್ತರಿಸುವ ಮೂಲಕ ಅಮಾಯಕರಿಗೆ ತೊಂದರೆ ಕೊಡುವ ಕೆಲಸ ಮಾಡಿವೆ. ಸತ್ಯ ವಿಚಾರವನ್ನು ಮರೆಮಾಚಿ ಮಾಧ್ಯಮ ರಂಗಕ್ಕೆ ಕಪ್ಪು ಚುಕ್ಕೆ ತರುವಂತಹ ವರದಿ ಬಿತ್ತರಿಸುವ ಚಾನೆಲ್‌ಗಳನ್ನು ಧಿಕ್ಕರಿಸುವ ಮೂಲಕ ಜನತೆ ಅವರಿಗೆ ಸರಿಯಾದ ಪಾಠ ಕಲಿಸಬೇಕೆಂದು ಹೇಳಿದರು. ಸಮಾಜಕ್ಕೆ ಸತ್ಯಾಸತ್ಯತೆಯ ಸಂದೇಶ ನೀಡಿ ದೇಶದ ಐಕ್ಯತೆ, ಸಮಾನತೆಯನ್ನು ಉಳಿಸಬೇಕಾದ ಕೆಲ ಮಾಧ್ಯಮಗಳು ಸಾಮಾಜಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದು, ಮುಗ್ಧ ಜನರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸುತ್ತಿವೆ. ಮಾಧ್ಯಮಗಳು ಸತ್ಯಾಂಶವನ್ನು ತಿರುಚಿ ಕಪೋಲಕಲ್ಪಿತ ವರದಿ ಬಿತ್ತರಿಸಿ ಜನ ಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಅನೀಸ್ ಕೌಸರಿ ಹೇಳಿದರು.
ಕೆಆರ್‌ಜೆಎಂ ಅಧ್ಯಕ್ಷ ಪಿ.ಎಂ.ಇಬ್ರಾಹಿಂ ದಾರಿಮಿಯವರು ದು:ವಾ ನೆರವೇರಿಸಿದರು. ಎಸ್‌ಕೆಎಸ್ಸೆಸ್ಸೆಫ್ ಟ್ರೆಂಡ್ ದ.ಕ.ಜಿಲ್ಲಾಧ್ಯಕ್ಷ ಇಕ್ಬಾಲ್ ಬಾಳಿಲ, ಸುಂಕದಕಟ್ಟೆ ಮಸೀದಿ ಖತೀಬ್ ಅಹ್ಮದ್ ದಾರಿಮಿ, ನೆಕ್ಕರೆ ಮಸೀದಿ ಖತೀಬ್ ಖಾಲಿದ್ ಫೈಝಿ, ಕುಂತೂರು ಎ& ಬಿ ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ದಾರಿಮಿ, ಕಳಾರ ಮಸೀದಿ ಖತೀಬ್ ಅಬ್ದುಲ್‌ಸ್ಸಲಾಂ ಅಮಾನಿ, ಪೊಸೋಳಿಗೆ ಮಸೀದಿ ಖತೀಬ್ ಹಸನ್ ಮದನಿ, ಪನ್ಯ ಜೆ.ಎಮ್.ನ ರಝಾಕ್ ದಾರಿಮಿ, ಸುರುಳಿ ಮಸೀದಿ ಇಮಾಮ್ ಶೌಕತ್ತಲಿ ಮುಸ್ಲಿಯಾರ್, ಹೊಸಮಠ ಮಸೀದಿ ಇಮಾಮ್ ರಿಯಾಝ್ ರಹೀಮಿ, ಕೆಆರ್‌ಎಂಎಂ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್, ಕೆಆರ್‌ಎಂಎಂ ಪ್ರಧಾನ ಕಾರ್ಯದರ್ಶಿ ಕೆ.ಎಂ.ಇಬ್ರಾಹಿಂ ಕಳಾರ, ಪೊಸೋಳಿಗೆ ಮಸೀದಿ ಅಧ್ಯಕ್ಷ ಪುತ್ತುಂಞಿ ಮೀನಾಡಿ, ನೆಕ್ಕರೆ ಮಸೀದಿ ಅಧ್ಯಕ್ಷ ಅಝಾದ್ ಕೆ.ಎಸ್.ನೆಕ್ಕರೆ, ಪನ್ಯ ಮಸೀದಿ ಅಧ್ಯಕ್ಷ ಕೆ.ಪಿ.ಎಂ.ಶರೀಫ್ ಫೈಝಿ, ಕಳಾರ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಡ್ಕಾಡಿ, ಕುಂತೂರು ಮಸೀದಿ ಅಧ್ಯಕ್ಷ ಅನೀಸ್ ನೂಚಿಲ, ನೆಟ್ಟಣ ಮಸೀದಿ ಅಧ್ಯಕ್ಷ ಹುಸೈನ್ ನೆಟ್ಟಣ, ಎಸ್‌ಕೆಎಸ್ಸೆಸ್ಸೆಫ್ ಕುಂತೂರು ಕ್ಲಸ್ಟರ್ ಅಧ್ಯಕ್ಷ ಮಹಮ್ಮದಾಲಿ, ವಲಯ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಶರೀಫ್ ದಾರಿಮಿ, ಕೋಶಾಧಿಕಾರಿ ಪುತ್ತುಮೋನು ಅನ್ನಡ್ಕ, ಕೆ.ಎಂ.ಹನೀಫ್, ಶರೀಫ್ ಎ.ಎಸ್., ಇಸ್ಮಾಯಿಲ್ ಅಲ್‌ಅಮೀನ್, ಎಸ್‌ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷರುಗಳಾದ ಎಸ್.ಎಂ.ಬಶೀರ್ ಮುಸ್ಲಿಯಾರ್ ಕಡಬ, ಹಾರೀಶ್ ಮುಸ್ಲಿಯಾರ್ ಕಳಾರ, ಯಾಹ್ಯಾ ಮುಸ್ಲಿಯಾರ್ ಮರ್ದಾಳ, ಅಬ್ದುಲ್ ರಹಿಮಾನ್ ನೆಟ್ಟಣ, ಮಹಮ್ಮದ್ ಆಲಿ ಹೊಸ್ಮಠ, ಹನೀಫ್ ಕಲ್ಲಾಜೆ, ಹಸೈನಾರ್ ಮುಸ್ಲಿಯಾರ್ ಕೋಡಿಂಬಾಳ, ಇಲ್ಯಾಸ್ ಮೀನಾಡಿ ಪೊಸೋಳಿಗೆ, ಮಜೀದ್ ಹುದವಿ ಪನ್ಯ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎಸ್ಕೆಎಸ್ಸೆಸ್ಸೆಫ್ ಕಡಬ ವಲಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಪ್ರತಿಭಟನೆಯ ಬಳಿಕ ಮೌನ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್‌ರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಸತ್ಯ ತಿಳಿಯದೆ ಅಮಾಯಕರಿಗೆ ಭಯೋತ್ಪಾದಕ ಪಟ್ಟ ನೀಡಿ ವರದಿ ಬಿತ್ತರಿಸುವ ಮಾಧ್ಯಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.