(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ, ಮುಂದುವರೆದಿದ್ದು, ಹಲವೆಡೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
ನಿರಂತರ ಸುರಿಯುತ್ತಿರೊ ಮಳೆಯಿಂದಾಗಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ಕೆಂಪುಹೊಳೆಯಲ್ಲಿ ನೀರಿನ ಪ್ರವಾಹ ಹೆಚ್ಚಾಗುತ್ತಿದ್ದು, ಉದನೆ ಪೇಟೆಯಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ನದಿ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ.ಶಿಶಿಲದಲ್ಲಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಶಿಶಿಲ ದೇವಾಲಯವು ಅಕ್ಷರಶ ದ್ವೀಪವಾಗಿ ಪರಿಣಮಿಸಿದೆ.
ದೇವಳಕ್ಕೆ ಹಾಗೂ ಆ ಭಾಗದ ಜನರಿಗೆ ಇರುವ ಒಂದು ಸಂಪರ್ಕ ರಸ್ತೆಯಲ್ಲೇ ರಭಸದಿಂದ ನೀರು ಉಕ್ಕಿ ಹರಿಯುತ್ತಿರುವುದರಿಂದ ಸಂಚಾರ ಕಷ್ಟ ಸಾಧ್ಯವಾಗಿದೆ. ತೂಗುಸೇತುವೆ ಇದ್ದರೂ ರಸ್ತೆಯೇ ಮುಳುಗಡೆಯಾದ ಹಿನ್ನೆಲೆಯಲ್ಲಿ ಸಂಪರ್ಕ ಬಂದ್ ಆಗಿದೆ. ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಮನೆ, ಕೃಷಿ ತೋಟಗಳು ಜಲಾವೃತವಾಗಿದೆ.