(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.5.2019-20ನೇ ಸಾಲಿಗೆ ಬಾಲಕರಿಗಾಗಿ “ಹೊಯ್ಸಳ” ಮತ್ತು ಬಾಲಕಿಯರಿಗಾಗಿ “ಕೆಳದಿ ಚೆನ್ನಮ್ಮ” ಶೌರ್ಯ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ಕಾರ್ಯಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ತಲಾ ರೂ. 10,000 ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಶೌರ್ಯ ಪ್ರದರ್ಶಿಸಿದ ಅವಧಿಯು ಆಗಸ್ಟ್ 2018 ರಿಂದ ಜುಲೈ 2019 ರೊಳಗೆ ನಡೆದಿರಬೇಕು ಮತ್ತು ಈ ಬಗ್ಗೆ ಆರಕ್ಷಕ ಇಲಾಖೆಯ ಪ್ರಥಮ ವರ್ತಮಾನ ವರದಿ(FIR), ಭಾವಚಿತ್ರ, ಜನ್ಮ ದಿನಾಂಕ ದಾಖಲೆ (ತಾಲೂಕುಗಳಲ್ಲಿ ತಹಶೀಲ್ದಾರರು/ನಗರಗಳಲ್ಲಿ ಮಹಾನಗರಪಾಲಿಕೆಯಿಂದ ದೃಢೀಕರಿಸಿದ) ಹಾಗೂ ಶೌರ್ಯ ಪ್ರದರ್ಶಿಸಿದ ಬಗೆಗಿನ ಪತ್ರಿಕಾ ವರದಿ ಇನ್ನಿತರ ಪೂರಕ ದಾಖಲೆಗಳನ್ನು ಸಲ್ಲಿಸಬೇಕು.
ಅರ್ಜಿಗಳನ್ನು ಕನ್ನಡ ಭಾಷೆಯಲ್ಲಿಯೇ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ, ಉರ್ವಸ್ಟೋರ್, ಮಂಗಳೂರು-575006 ದೂರವಾಣಿ ಸಂಖ್ಯೆ: 0824-2451254 ಸಂಪರ್ಕಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.