(ನ್ಯೂಸ್ ಕಡಬ) newskadaba.com ಹಾವೇರಿ, ಆ.14. 2017 ರ ವರ್ಷಾರಂಭದ ಜನವರಿ 1ರಂದು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ರಾಣೆಬೆಣ್ಣೂರು ಬಸ್ ಡಿಪೋದಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದ ವ್ಯಕ್ತಿ ಇಂದು ಪ್ರತ್ಯಕ್ಷವಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.
ಜನವರಿ 1 ರಂದು ರಾಣೆಬೆಣ್ಣೂರು ಬಸ್ ಡಿಪೋದಲ್ಲಿ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ನಿಂಗರಾಜ್ ಬೆಳಗುಟ್ಟಿ ಎಂಬವರನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅಂದು ಕೊಲೆ ನಡೆದ ಸ್ಥಳದಲ್ಲಿ ಡ್ಯೂಟಿಯಲ್ಲಿದ್ದ ನಿಂಗರಾಜ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದು, ಅಗ್ನಿ ದುರಂತದಲ್ಲಿ ಸಜೀವ ದಹನವಾಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಆಗಸ್ಟ್ 14 ರಂದು ಇದ್ದಕ್ಕಿದ್ದ ಹಾಗೆ ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಿದ್ದು, ಹಾಗಾದರೆ ಜನವರಿ 8ರಂದು ಡಿಪೋದಲ್ಲಿ ಪತ್ತೆಯಾಗಿದ್ದ ಶವ ಯಾರದು? ಹಾಗು ನಿಂಗರಾಜ್ ಇಷ್ಟು ದಿನ ನಾಪತ್ತೆಯಾಗಿದ್ದು ಯಾಕೆ ಎಂಬ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಈ ಸಂಬಂಧ ರಾಣೆಬೆನ್ನೂರು ಪೊಲೀಸರು ನಿಂಗರಾಜ್ ಹಾಗೂ ಪತ್ನಿ ನೇತ್ರಾವತಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.