(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.02. ತಾನು ಧರಿಸಿದ್ದ ಬಟ್ಟೆ ಬೈಕಿನ ಹಿಂಬದಿ ಚಕ್ರಕ್ಕೆ ಸಿಲುಕಿದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಮಹಿಳೆಯೋರ್ವರು ಮೃತಪಟ್ಟ ಘಟನೆ ಗುರುವಾರ ಸಂಜೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಬೆಳ್ತಂಗಡಿ ಕಣಿಯೂರು ಸಮೀಪದ ನಿವಾಸಿ ಫಾತಿಮಾ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯು ರಾಝಿಕ್ ಎಂಬವರೊಂದಿಗೆ ಗುರುವಾರ ಸಂಜೆ ಬೈಕಿನಲ್ಲಿ ಸಹ ಸವಾರೆಯಾಗಿ ಸಂಚರಿಸುತ್ತಿದ್ದ ವೇಳೆ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯ ಗೋವಿಂದೂರು ಬಸ್ಸು ನಿಲ್ದಾಣದ ಬಳಿ ಫಾತಿಮಾ ಧರಿಸಿದ್ದ ಬಟ್ಟೆ ಬೈಕ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ರಸ್ತೆಗೆಸೆಯಲ್ಪಟ್ಟ ಫಾತಿಮಾರ ತಲೆಗೆ ತೀವ್ರ ಗಾಯಗಳಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.