ಟೆಸ್ಟ್ ಕ್ರಿಕೆಟ್ ವಿಶ್ವ ಸಮರ ಹಣಾಹಣಿ ➤ ನಾಳೆಯಿಂದ ಟೆಸ್ಟ್ ಕ್ರಿಕೆಟ್ ವಿಶ್ವಕಪ್

(ನ್ಯೂಸ್ ಕಡಬ) newskadaba.com ಕ್ರೀಡಾ ವಾರ್ತೆ, ಜುಲೈ.31.

ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವಕಪ್ ರೀತಿಯ ಟೂರ್ನಿಯೊಂದು ನಡೆಯಲಿದೆ. ಐಸಿಸಿಯ ಬಹಳ ವರ್ಷದ ಪರಿಶ್ರಮದಿಂದ ‘ವರ್ಲ್ಡ್ ಟೆಸ್ಟ್ ಚಾಂಪಿಯನ್​ಷಿಪ್’ ಅಥವಾ ಡಬ್ಲ್ಯುಟಿಸಿ ಹೆಸರಿನ ಮಹಾಟೂರ್ನಿಗೆ ಆಗಸ್ಟ್ 1ರಂದು ಆಶಸ್ ಸರಣಿಯೊಂದಿಗೆ ಚಾಲನೆ ಸಿಗಲಿದೆ. ಮುಂದಿನ ಎರಡು ವರ್ಷಗಳ ಕಾಲ ಡಬ್ಲ್ಯುಟಿಸಿ ಟ್ರೋಫಿಗಾಗಿ ವಿಶ್ವದ ಅಗ್ರ 9 ತಂಡಗಳು ಹೋರಾಟ ನಡೆಸಲಿದ್ದು, ಅಂಕಪಟ್ಟಿಯ ಅಗ್ರ 2 ತಂಡಗಳು 2021ರ ಜೂನ್ 10ರಿಂದ 14ರವರೆಗೆ ಲಾರ್ಡ್ಸ್​ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಫೈನಲ್ ಡ್ರಾ ಅಥವಾ ಟೈ ಆದರೆ ಉಭಯ ತಂಡಗಳನ್ನು ‘ಜಂಟಿ ಚಾಂಪಿಯನ್’ ಎಂದು ಘೋಷಿಸಲಾಗುವುದು. ಡಬ್ಲ್ಯುಟಿಸಿಯ ತೀರಾ ವಿಶೇಷವಾದ ಪ್ರಕ್ರಿಯೆ ಏನೆಂದರೆ, ವಿಶ್ವಕಪ್ ನಡೆಯುವಂತೆ ಒಂದೇ ಸ್ಥಳದಲ್ಲಿ, 15-20 ದಿನಗಳ ಟೂರ್ನಿಯಾಗಿ ನಡೆಯುವುದಿಲ್ಲ. ಎರಡು ವರ್ಷಗಳ ಕಾಲ ವಿಶ್ವದ 9 ಅಗ್ರ ಟೆಸ್ಟ್ ರಾಷ್ಟ್ರಗಳು ತಮ್ಮ ನಡುವೆ ಆಡಲಿರುವ ದ್ವಿಪಕ್ಷೀಯ ಟೆಸ್ಟ್ ಸರಣಿಗಳು ಡಬ್ಲ್ಯುಟಿಸಿಯ ಭಾಗವಾಗಿ ಇರಲಿವೆ. ಪ್ರತಿ ಗೆಲುವು, ಡ್ರಾಕ್ಕೆ ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ತಂಡ ಕನಿಷ್ಠ 2ರಿಂದ ಗರಿಷ್ಠ 5 ಪಂದ್ಯಗಳ ತಲಾ 6 ಸರಣಿಗಳನ್ನು ಆಡಲಿದೆ. 2021ರ ಜೂನ್ ವೇಳೆಗೆ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ತಂಡಗಳು ಫೈನಲ್​ನಲ್ಲಿ ಹೋರಾಟ ನಡೆಸಲಿವೆ. ಡಬ್ಲ್ಯುಟಿಸಿ ಬಗ್ಗೆ ಐಸಿಸಿಗೆ ಮೊದಲು ಐಡಿಯಾ ಹೊಳೆದಿದ್ದು 2009ರಲ್ಲಿ. 2010ರಲ್ಲಿ ಚಾಂಪಿಯನ್​ಷಿಪ್​ಗೆ ಐಸಿಸಿ, ತನ್ನ ಮಹಾಸಭೆಯಲ್ಲಿ ಒಪ್ಪಿಗೆಯನ್ನೂ ಪಡೆದುಕೊಂಡಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದಲ್ಲಿ 2013ರಲ್ಲಿಯೇ ಮೊದಲ ಆವೃತ್ತಿಯ ಡಬ್ಲ್ಯುಟಿಸಿ ನಡೆಯಬೇಕಿತ್ತು. ಆದರೆ, ಸೂಕ್ತ ಪ್ರಾಯೋಜಕರು ಹಾಗೂ ಸದಸ್ಯ ಕ್ರಿಕೆಟ್ ಸಂಸ್ಥೆಗಳ ಕೆಲ ಗೊಂದಲಗಳಿಂದಾಗಿ 2017ಕ್ಕೆ ಮುಂದೂಡಿಕೆಯಾಗಿತ್ತು. ಕೊನೆಗೆ 2019ರ ಆಗಸ್ಟ್ 1ರಿಂದ 2021ರ ಏಪ್ರಿಲ್ 30ರವರೆಗಿನ ಅವಧಿಯಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್​ಷಿಪ್ ನಡೆಸುವುದೆಂದು ಐಸಿಸಿ ತೀರ್ಮಾನ ಮಾಡಿತ್ತು. ಈಗ ಐಸಿಸಿಯ ಈ ಕನಸು ನನಸಾಗುವ ಹಂತದಲ್ಲಿದೆ. ಆಗಸ್ಟ್ 1ರಿಂದ 5ರವರೆಗೆ ಎಜ್​ಬಾಸ್ಟನ್​ನಲ್ಲಿ ನಡೆಯಲಿರುವ ಮೊದಲ ಆಶಸ್ ಟೆಸ್ಟ್, ಡಬ್ಲ್ಯುಟಿಸಿಯ ಮೊಟ್ಟಮೊದಲ ಪಂದ್ಯವಾಗಿರಲಿದೆ. ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಗಸ್ಟ್ 22ರಿಂದ ನಾರ್ಥ್ ಸೌಂಡ್​ನಲ್ಲಿ ತನ್ನ ಮೊದಲ ಡಬ್ಲ್ಯುಟಿಸಿ ಟೆಸ್ಟ್ ಪಂದ್ಯವನ್ನು ಆಡಲಿದೆ.

Also Read  ಟಿ20- ಟೆಸ್ಟ್‌ ಗೆ ನಿವೃತ್ತಿ ಘೋಷಿಸಿದ ಶಕೀಬ್ ಅಲ್ ಹಸನ್

ಜೆರ್ಸಿಯಲ್ಲಿ  ಹೆಸರು, ನಂಬರ್:

ಇದೇ ಮೊದಲ ಬಾರಿಗೆ ಆಟಗಾರರ ಜೆರ್ಸಿಯ ಬೆನ್ನಹಿಂದೆ ನಂಬರ್ ಮತ್ತು ಅವರ ಹೆಸರುಗಳನ್ನು ಮುದ್ರಿಸಲು ಐಸಿಸಿ ಅವಕಾಶ ಕಲ್ಪಿಸಿದೆ. ಇದೂ ಆಶಸ್ ಸರಣಿಯಿಂದಲೇ ಜಾರಿಗೆ ಬರುತ್ತಿದೆ.

ಆಡುವ ದೇಶಗಳ ಪಟ್ಟಿ: ಪ್ರಸ್ತುತ ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರ 9 ಸ್ಥಾನಗಳಲ್ಲಿರುವ ದೇಶಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮೊದಲ ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ಆಡಲಿವೆ. ಕ್ರಿಕೆಟ್ ಮಂಡಳಿಯ ಬಿಕ್ಕಟ್ಟಿನಿಂದಾಗಿ ಅಮಾನತಿನಲ್ಲಿರುವ ಜಿಂಬಾಬ್ವೆ ಹಾಗೂ ಟೆಸ್ಟ್ ಕ್ರಿಕೆಟ್​ನ ಹೊಸ ರಾಷ್ಟ್ರಗಳಾದ ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ಈ ಪ್ರಶಸ್ತಿಯ ರೇಸ್​ನಲ್ಲಿಲ್ಲ. ಆದರೆ ಇದೇ ಅವಧಿಯಲ್ಲಿ ಈ ತಂಡಗಳೊಂದಿಗೆ ಮೇಲಿನ 9 ದೇಶಗಳು ಟೆಸ್ಟ್ ಪಂದ್ಯಗಳನ್ನು ಆಡಬಹುದಾದರೂ, ಅದು ಡಬ್ಲ್ಯುಟಿಸಿಗೆ ಪರಿಗಣನೆ ಆಗುವುದಿಲ್ಲ. ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಷ್ಟೇ ಅಂಕ ತಂದುಕೊಡುತ್ತವೆ.

Also Read  ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು 20 ವರ್ಷ ತೆಗೆದುಕೊಳ್ಳುತ್ತದೆ ➤ RBI ಮಾಜಿ ಮುಖ್ಯಸ್ಥ ಸಿ.ರಂಗರಾಜನ್

ಡಬ್ಲ್ಯುಟಿಸಿಯಲ್ಲಿ ಭಾರತಕ್ಕೆ 18 ಟೆಸ್ಟ್ ಪಂದ್ಯಗಳು: ಆಗಸ್ಟ್ 22ರಿಂದ ವೆಸ್ಟ್ ಇಂಡೀಸ್​ನಲ್ಲಿ ಆಡಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿ ಭಾರತಕ್ಕೆ ಡಬ್ಲ್ಯುಟಿಸಿಯ ಮೊದಲ ಸರಣಿ ಆಗಿರಲಿದೆ. ಈ ಸರಣಿ 120 ಅಂಕಗಳದ್ದಾಗಿರಲಿದ್ದು, ಭಾರತ ಎರಡೂ ಪಂದ್ಯ ಗೆದ್ದಲ್ಲಿ 120 ಅಂಕಗಳನ್ನು ಗೆಲ್ಲಲಿದೆ.

ಭಾರತದ ಡಬ್ಲ್ಯುಟಿಸಿ ವೇಳಾಪಟ್ಟಿ:

 ವೆಸ್ಟ್ ಇಂಡೀಸ್​ನಲ್ಲಿ 2 ಪಂದ್ಯ    : 2019 ಆಗಸ್ಟ್-ಸೆಪ್ಟೆಂಬರ್
 ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯ : 2019 ಅಕ್ಟೋಬರ್
 ಬಾಂಗ್ಲಾದೇಶ ವಿರುದ್ಧ 2 ಪಂದ್ಯ  : 2019 ನವೆಂಬರ್
 ನ್ಯೂಜಿಲೆಂಡ್​ನಲ್ಲಿ 2 ಪಂದ್ಯ       : 2020 ಫೆಬ್ರವರಿ-ಮಾರ್ಚ್
 ಆಸೀಸ್​ನಲ್ಲಿ 4 ಪಂದ್ಯ              : 2020 ನವೆಂಬರ್-2021 ಜನವರಿ
 ಇಂಗ್ಲೆಂಡ್ ವಿರುದ್ಧ 5 ಪಂದ್ಯ       : 2021 ಜನವರಿ-ಮಾರ್ಚ್

error: Content is protected !!
Scroll to Top