ಯಾವುದೇ ಸಂಭಾವನೆ ಪಡೆಯದೇ ರಸ್ತೆ ದುರಸ್ತಿ ಮಾಡುವ ಹಿರಿ ಜೀವ ➤ ಪರಿಸರ ಪ್ರೇಮವೆಂದರೆ ಇವರಿಗೆ ಪಂಚಪ್ರಾಣ ✍?ಸದಾನಂದ ಆಲಂಕಾರು

(ನ್ಯೂಸ್ ಕಡಬ) newskadaba.com ಆಲಂಕಾರು, ಜು.16. ನಮ್ಮ ಗ್ರಾಮದ ರಸ್ತೆ ಅದು ವ್ಯವಸ್ಥಿತವಾಗಿರಬೇಕು ಎಂದು ಹಂಬಲಿಸುವ ಜನ ಇಂದು ವಿರಳವಾಗುತ್ತಿದ್ದು, ಊರಿನ ಸಂಪರ್ಕಕ್ಕಿರುವ ರಸ್ತೆಗೆ ಮಳೆ ನೀರನ್ನು ಬಿಟ್ಟು ಸ್ಥಳಿಯಾಡಳಿತವನ್ನು ತರಾಟೆಗೆ ತೆಗೆದುಕೊಂಡು ವಿಘ್ನ ಸಂತೋಷ ಪಡುವ ಜನತೆಯೇ ಇಂದು ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಇಂತಹ ಕಾಲಘಟ್ಟದಲ್ಲಿ ತನ್ನ ಇಳಿ ವಯಸ್ಸಿನಲ್ಲಿಯು ಗ್ರಾಮದ ಅಭಿವೃದ್ದಿಗೆ ಕಿಂಚಿತ್ತು ಸೇವೆ ನೀಡಬೇಕು ಎಂದು ಹಂಬಲಿಸುವ ಹಿರಿಯ ನಾಗರೀಕರೊಬ್ಬರು ವರ್ಷವಿಡೀ ರಸ್ತೆ ದುರಸ್ತಿ ಮಾಡುತ್ತಾ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಡಬ ತಾಲೂಕು ಆಲಂಕಾರು ಗ್ರಾಮದ ಶರವೂರು ಉಜುರ್ಲಿ ನಿವಾಸಿ ಸುಬ್ರಹ್ಮಣ್ಯ ಉಪಾಧ್ಯಾಯರವರು ಈ ಎಲ್ಲಾ ಬೆಳವಣಿಗೆಯ ವಿಶಿಷ್ಟ ವ್ಯಕ್ತಿಯಾಗಿದ್ದಾರೆ.


ಪ್ರತೀ ಬೇಸಿಗೆ ಹಾಗೂ ಮಳೆಗಾಲದಲ್ಲಿ ಇವರ ಮನೆಯನ್ನು ಸಂಪರ್ಕಿಸುವ ರಸ್ತೆಯ ಜೊತೆಗೆ ಗ್ರಾಮವನ್ನು ಸಂಪರ್ಕಿಸುವ ಪಾಂಜೋಡಿ – ಕಕ್ವೆ ರಸ್ತೆಯನ್ನು ಯಾವುದೇ ಸಂಭಾವನೆ ಪಡೆಯದೇ ಏಕಾಂಗಿಯಾಗಿ ದುರಸ್ತಿ ಮಾಡುವುದು ಇವರ ದಿನ ನಿತ್ಯದ ಕಾಯಕವಾಗಿದೆ. ಬೇಸಿಗೆ, ಮಳೆಗಾಲವಿರಲಿ ಇವರ ಸೇವೆ ನಿರಂತರವಾಗಿ ನಡೆಯುತ್ತದೆ. ಪ್ರತೀ ದಿನ ಬೆಳಿಗ್ಗೆ ಕತ್ತಿ ಹಾರೆಯೊಂದಿಗೆ ರಸ್ತೆಯ ಉದ್ದಗಲಕ್ಕೂ ಸಂಚರಿಸಿ ರಸ್ತೆಯಲ್ಲಿ ಮಳೆ ನೀರಿನಿಂದಾಗಿ ಬಿದ್ದಿರುವ ಗುಂಡಿಗಳಿಗೆ ಮಣ್ಣು, ಕಲ್ಲು ತುಂಬಿಸಿ ರಸ್ತೆ ದುರಸ್ತಿ ಮಾಡಿ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಮುತುವರ್ಜಿ ವಹಿಸುತ್ತಾರೆ. ರಸ್ತೆ ಬದಿಯಲ್ಲಿ ನೆಟ್ಟಿರುವ ನೆಡುತೋಪುಗಳ ಗಿಡಗಳಿಗೆ ಮಣ್ಣು ಹಾಕಿ ರಕ್ಷಣೆ ಮಾಡುವುದರ ಮೂಲಕ ಪರಿಸರ ಪ್ರೇಮವನ್ನು ತೋರ್ಪಡಿಸುತ್ತಾರೆ.

Also Read  ಕಡಬ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು


ಉಪಾಧ್ಯಾಯರು ಕಳೆದ 27 ವರ್ಷಗಳಿಂದ ನಿರಂತರ ಎಲೆಮರೆಯ ಕಾಯಿಯಂತೆ ಈ ಸೇವೆಯನ್ನು ಮಾಡುತ್ತಿದ್ದು ಯಾವುದೇ ಸಂಘ ಸಂಸ್ಥೆಯಾಗಲಿ ಸ್ಥಳಿಯಾಡಳಿತವಾಗಲಿ ಇವರ ಸೇವೆಯನ್ನು ಗುರುತಿಸದೇ ಇರುವುದು ಬೇಸರದ ಸಂಗತಿಯಾಗಿದೆ. ಇವರು ಯಾವುದೇ ಮಳೆ – ಗಾಳಿ – ಚಳಿಯಿರಲಿ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸುಮಾರು ಮೂರು ಕಿ.ಲೋ.ಮೀಟರ್ ದೂರದ ರಸ್ತೆಯನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಹಾರೆ ಪಿಕ್ಕಾಸಿನೊಂದಿಗೆ ನಿತ್ಯವು ಇವರು ವೀಕ್ಷಿಸಿ ತುರ್ತು ಕಾಮಗಾರಿ ನಡೆಯಬೇಕಾದ ಸ್ಥಳದಲ್ಲಿ ಕಾಮಗಾರಿಯನ್ನು ಮುಗಿಸಿಯೇ ತೆರಳುತ್ತಾರೆ.

ರಸ್ತೆಗಳು ದೇಹದ ನರಗಳು ಇದ್ದಂತೆ: ಸುಬ್ರಹ್ಮಣ್ಯ ಉಪಾಧ್ಯಾಯ
ಒಂದು ಊರನ್ನು ಸಂಪರ್ಕಿಸುವ ರಸ್ತೆಗಳು ಒಬ್ಬ ಮಾನವನ ದೇಹದ ನರ ನಾಡಿಗಳಿಗೆ ಸಮ. ಒಂದು ನರ ಸರಿಯಾಗಿ ಕೆಲಸ ಸರಿಯಾಗಿ ನಿರ್ವಹಿಸದಿದ್ದರೆ ಆತನ ದೇಹದ ಆರೋಗ್ಯವೇ ಸಂಪೂರ್ಣ ಕೆಟ್ಟು ಹೋಗುತ್ತದೆ. ಹಾಗೆಯೇ ಗ್ರಾಮವನ್ನು ಸಂಪರ್ಕಿಸುವ ಒಂದು ರಸ್ತೆ ಸರಿಯಿಲ್ಲವಾದರೆ ಆ ಊರು ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತವಾದಂತೆ. ಈ ಕಾರಣಕ್ಕಾಗಿ ನನ್ನಿಂದಾಗುವಂತಹ ಅಳಿಲ ಸೇವೆಯನ್ನು ಗ್ರಾಮಕ್ಕೆ ನೀಡುತ್ತಿದ್ದೇನೆ ಎಂದು ಸುಬ್ರಹ್ಮಣ್ಯ ಉಪಾಧ್ಯಾಯರವರು ತಮ್ಮ ಸೇವಾ ಮನೋಭಾವನೆಯ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

Also Read  ಮಸೀದಿಗೆ ಅಕ್ರಮವಾಗಿ ಪ್ರವೇಶಿಸಿ ಗುರುಗಳಿಗೆ ಹತ್ಯೆ ಬೆದರಿಕೆ...! ➤ ಆರೋಪಿ ಪೊಲೀಸ್ ವಶಕ್ಕೆ


ಸೇವೆ ಇಡೀ ಮಾನವ ಕುಲಕ್ಕೆ ಮಾದರಿ: ಕೇಶವ ಗೌಡ ಆಲಡ್ಕ
ಶ್ರಮದಾನ ಎಂಬುವುದು ಇಂದಿನ ಕಾಲಘಟ್ಟದಲ್ಲಿ ಮರೀಚಿಕೆಯಾಗಿದೆ. ಇಂತಹ ವೇಳೆ ಆಲಂಕಾರು ಗ್ರಾಮದ ಉಜುರ್ಲಿ ನಿವಾಸಿ ಸುಬ್ರಹ್ಮಣ್ಯ ಉಪಾಧ್ಯಾಯರವರು ಮಾದರಿಯಾಗಿದ್ದಾರೆ. ಇಂದು ರಸ್ತೆಯನ್ನೇ ಕಬಳಿಸಿ ಸ್ವಾಹ ಮಾಡುವ ಜನತೆಯೇ ಇಂದು ಎಲ್ಲೆಡೆ ಕಾಣಬಹುದು. ಇಂತಹ ಸಮಾಜದ ಆಭಿವೃದ್ದಿಗೆ ಶ್ರಮಿಸುವ ಜನತೆ ಗ್ರಾಮದ ಪ್ರತೀ ವಾರ್ಡಿನಲ್ಲೂ ಇದ್ದರೆ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ವಾರ್ಡ್ ಸದಸ್ಯ ಕೇಶವ ಗೌಡ ಆಲಡ್ಕ ಪ್ರತಿಕ್ರಿಯಿಸಿದ್ದಾರೆ.

error: Content is protected !!
Scroll to Top