(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.11. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ದತ್ತು ಯೋಜನೆಯಡಿ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಶುಕ್ರವಾರದಂದು ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗದಲ್ಲಿ ಬಟ್ಟಲು ಹಿಡಿದು ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳಿಗೆ ಪೋಷಕರು, ಸಂಘಟನೆಯ ಮುಖಂಡರು ಸಾಥ್ ನೀಡಿದರು. ವಿವಿಧ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತನಾಡಿ ಸಿದ್ದರಾಮಯ್ಯ ಸರಕಾರದ ಧೋರಣೆಯನ್ನು ಖಂಡಿಸಿದರು. ಒಂದು ಹಂತದಲ್ಲಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ವಿರುದ್ಧ ಧಿಕ್ಕಾರ ಕೂಗಿದರು. ತಮ್ಮ ಕಿಸೆಯ ಹಣದಿಂದ ಕೊಲ್ಲೂರು ದೇವಳ ಅನ್ನ ನೀಡುತ್ತಿಲ್ಲ, ಭಕ್ತರು ಹಾಕಿದ ಹಣದಿಂದ ಅನ್ನ ನೀಡುತ್ತಿದೆ. ರಾಜಕೀಯ ದ್ವೇಷಕ್ಕಾಗಿ ಅನುದಾನವನ್ನು ರದ್ದುಗೊಳಿಸಿ ನಮ್ಮ ಒಂದು ಹೊತ್ತಿನ ತುತ್ತು ಅನ್ನಕ್ಕೆ ಮಣ್ಣು ಹಾಕಿದ ನಿಮಗೆ ನಮ್ಮ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನುದಾನ ರದ್ದು ಆದೇಶವನ್ನು ಕೂಡಲೇ ವಾಪಾಸು ಪಡೆದು ಮುಕಾಂಬಿಕೆಯ ಅನ್ನ ಪ್ರಸಾದ ಮತ್ತೆ ಮುಂದುವರಿಯಬೇಕು. ಇಲ್ಲದಿದ್ದಲ್ಲಿ ಮುಂದಿನ ವಿದ್ಯಾರ್ಥಿ ಶಕ್ತಿ ಏನೆಂಬುವುದನ್ನು ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತೋರಿಸುತ್ತೇವೆ ಎಂದು ಎಚ್ಚರಿಸಿದರು. ಶಾಲಾ ಅಧ್ಯಾಪಕ ವೃಂದದವರು ಹಾಜರಿದ್ದರು. ಕೊನೆಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತು ಎರ್ಪಡಿಸಲಾಗಿತ್ತು.