(ನ್ಯೂಸ್ ಕಡಬ) newskadaba.com ಮಂಗಳೂರು, ಆ.11. ಸ್ವಾಮೀಜಿಗಳು, ಯೋಗಿಗಳು ಮುಖ್ಯಮಂತ್ರಿಯಾಗುತ್ತಾರೆ. ಆದರೆ ಮುಸ್ಲಿಮರಲ್ಲಿರುವ ಉಸ್ತಾದರುಗಳು, ಧಾರ್ಮಿಕ ಮುಂದಾಳುಗಳು ಕನಿಷ್ಠ ಗ್ರಾಮ ಪಂಚಾಯತ್ ಹಂತಕ್ಕೆ ಕೂಡಾ ತಲುಪುತ್ತಿಲ್ಲ. ಇದು ನಿಜಕ್ಕೂ ವಿಷಾದನೀಯವಾಗಿದ್ದು, ಇದಕ್ಕಾಗಿ ನಿಮಗೆ ಭಾರತೀಯ ಜನತಾ ಪಾರ್ಟಿಯು ವೇದಿಕೆ ಕಲ್ಪಿಸಿ ಕೊಡುತ್ತದೆ ಎಂದು ಫಝಲ್ ಅಸೈಗೋಳಿ ಹೇಳಿದರು.
ಅವರು ಗುರುವಾರದಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾ ವತಿಯಿಂದ ಬೋಳಿಯಾರಿನಲ್ಲಿ ನಡೆದ ಮುಸ್ಲಿಮ್ ಧಾರ್ಮಿಕ ಗುರುಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ಮುಸ್ಲಿಮರಿಗೆ ಬಿಜೆಪಿ ಎಂದರೆ ಆಗುವುದಿಲ್ಲ. ಕಾಂಗ್ರೆಸ್ ಅಂಥಹಾ ಒಂದು ಮನೋಭಾವವನ್ನು ಮುಸ್ಲಿಮರಲ್ಲಿ ತಂದಿಟ್ಟಿದ್ದು, ಯಡಿಯೂರಪ್ಪ ಸರಕಾರವಿರುವ ಸಂದರ್ಭದಲ್ಲಿ ಪ್ರತೀ ಮುಸ್ಲಿಮ್ ಧರ್ಮಗುರುಗಳಿಗೆ ಸುಮಾರು 25,000ರೂ.ಯಂತೆ ಅನುದಾನ ನೀಡಲಾಗಿತ್ತು. ಇದಲ್ಲದೇ ಹಲವು ಮದ್ರಸ ಮಸೀದಿಗಳಿಗೆ ತಡೆಗೋಡೆ ನಿರ್ಮಾಣ, ಕಾರು ವಿತರಣೆ ಮುಂತಾದ ಕಾರ್ಯಗಳನ್ನು ಮಾಡಲಾಗಿತ್ತು. ಮೊತ್ತಮೊದಲು ಹಜ್ಘರ್ ನಿರ್ಮಾಣಕ್ಕೆ ಅನುದಾನ ನೀಡಿದ್ದು ಬಿಜೆಪಿ ಸರಕಾರವಾಗಿದೆ. ಆದರೆ ಮುಸ್ಲಿಮ್ ಉದ್ಧಾರಕರೆಂದು ಘೋಷಿಸುವ ಕಾಂಗ್ರೆಸ್ ಏನೂ ಮಾಡಿಲ್ಲ ಎಂದರು. ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್, ನೀವು ಯಾವುದಕ್ಕೂ ಹೆದರಬೇಕಾಗಿಲ್ಲ. ನಿಮಗೆ ಯಾವುದೇ ತೊಂದರೆ ಇದ್ದರೂ ಅದನ್ನು ನಿವಾರಿಸಲು ಬಿಜೆಪಿ ಪಕ್ಷವು ಸಿದ್ಧವಿದೆ. ನಾವು ಈಗಾಗಲೇ ಹಲವು ಪ್ರದೇಶಗಳಲ್ಲಿ ಜಾತಿಧರ್ಮ ನೋಡದೇ ಸಹಾಯ ಮಾಡಿದ್ದೇವೆ. ಸಹಾಯ ಮಾಡುವಾಗ ಆತ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಂದು ನೋಡಬಾರದು ಎಂದು ಹೇಳಿದರು.
ಧರ್ಮಗುರುಗಳು ಪಕ್ಷದ ಸಭೆಯಲ್ಲಿ ಭಾಗವಹಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕಂಡುಬಂದಿದ್ದು, ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇನ್ನೊಂದೆಡೆ ಧಾರ್ಮಿಕ ಮುಖಂಡರುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹಿನ್ನೆಲೆಯಲ್ಲಿ ಬೆಳ್ಮ ಕಲ್ಪಾದೆ ಮತ್ತು ತಲಪಾಡಿ ಮದರಸ ಶಿಕ್ಷಕನಾಗಿರುವ ಎ.ಬಿ ಹನೀಫ್ ನಿಝಾಮಿ ಎಂಬವರಿಗೆ ಜೀವಬೆದರಿಕೆ ಕರೆಗಳು ಬಂದಿವೆ. ಎರಡು ದೂರವಾಣಿ ಕರೆಗಳು + 9325921 ಮತ್ತು 9089446595 ಎಂಬ ದೂರವಾಣಿ ಮೂಲಕ ಬೆದರಿಕೆ ಕರೆಗಳು ಬಂದಿವೆ. ಈ ಕುರಿತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕ್ಷೇತ್ರ ಅಧ್ಯಕ್ಷ ಅಶ್ರಫ್ ಹರೇಕಳ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆಸ್ಗರ್ ಪಂಚಾಯತ್ ಸದಸ್ಯ ರಿಯಾಝ್ ಬೋಳಿಯಾರ್ ಅವರ ನಿಯೋಗ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಅದರಂತೆ ಪ್ರಕರಣ ದಾಖಲಿಸಲಾಗಿದೆ.