(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.29. ಪೇಪರ್ ಸ್ಟಾಲ್ ಒಂದರಲ್ಲಿ ದಿಢೀರ್ ಆಗಿ ನಾಗರಹಾವೊಂದು ಪ್ರತ್ಯಕ್ಷಗೊಂಡ ಪರಿಣಾಮ ಹಿಡಿಯಲೆಂದು ತೆರಳಿದ ರಿಕ್ಷಾ ಚಾಲಕರೋರ್ವರಿಗೆ ಹಾವು ಕಚ್ಚಿದ ಘಟನೆ ಶುಕ್ರವಾರದಂದು ನೆಲ್ಯಾಡಿಯಲ್ಲಿ ನಡೆದಿದೆ.
ನೆಲ್ಯಾಡಿ ಮುಖ್ಯ ಪೇಟೆಯಲ್ಲಿರುವ ಲಿಂಗಪ್ಪ ಕುಲಾಲ್ ಎಂಬವರಿಗೆ ಸೇರಿದ ಪೇಪರ್ ಸ್ಟಾಲ್‌ನಲ್ಲಿ ಹಳೆಯ ಪತ್ರಿಕೆಯ ಮೂಲೆಯೊಂದರಲ್ಲಿ ನಾಗರಹಾವು ಅವಿತಿರುವುದು ಶುಕ್ರವಾರದಂದು ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ರಿಕ್ಷಾ ಚಾಲಕ, ನೆಲ್ಯಾಡಿಯ ಉಮ್ಮರ್ ಕಜೆಕ್ಕಾಡ್ ಎಂಬವರು ಹಾವನ್ನು ಬರಿಗೈಯಲ್ಲಿಯೇ ಹಿಡಿಯಲು ಪ್ರಯತ್ನಿಸಿದ್ದು, ಈ ವೇಳೆ ಹಾವು ಅವರ ಕೈ ಬೆರಳಿಗೆ ಕಡಿದು ಗಾಯಗೊಳಿಸಿದೆ. ಗಾಯಗೊಂಡ ಉಮರ್ ರವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲುರವರು ಪಿವಿಸಿ ಪೈಪ್‌ನ ಸಹಾಯದಿಂದ ಹಾವನ್ನು ಸುರಕ್ಷಿತವಾಗಿ ಹಿಡಿದು ಪ್ಲಾಸ್ಟಿಕ್ ಗೋಣಿಯೊಂದರಲ್ಲಿ ತುಂಬಿಸಿ ಪೆರಿಯಶಾಂತಿ ಕಾಡಿಗೆ ಬಿಟ್ಟಿದ್ದಾರೆ.