(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2019 ಜೂನ್ 24 ರಂದು ಸಂಜೆ 4.30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಪೆರ್ನಾಲ್ ಸಂದೋಲ” ಮತ್ತು “ಕಿನಾದಿ” ಬ್ಯಾರಿ ಘಝಲ್ ಸಿಡಿ ಬಿಡುಗಡೆ’ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ನಗರಾಭಿವೃದ್ದಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಕಾಡೆಮಿಯ ಅಧ್ಯಕ್ಷರಾದ ಕರಂಬಾರ್ ಮಹಮದ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಬೋಳಂಗಡಿ ಹವ್ವಾ ಜುಮಾ ಮಸ್ಜಿದ್ ಖತೀಬರಾದ ಬಹುಮಾನ್ಯ ಯಾಹಿಯಾ ತಂಙಳ್‍ರವರು ‘ಕಿನಾದಿ’ ಘಝಲ್ ಸಿಡಿ ಬಿಡುಗಡೆಯನ್ನು ಮಾಡಲಿರುವರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‍ರವರು ‘ಕಿನಾದಿ’ ಕಲಾವಿದರಿಗೆ ಸನ್ಮಾನವನ್ನು ಮಾಡಲಿರುವರು.
ಬಹುಭಾಷಾ ಸಾಹಿತಿ ಜನಾಬ್ ಮುಹಮ್ಮದ್ ಬಡ್ಡೂರು ಪ್ರಸ್ತಾವನೆ ಮಾಡಲಿದ್ದು, ಕೆನರಾ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಇದರ ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷ ಜನಾಬ್ ಅಬ್ಬಾಸ್ ಅಲಿ ಹಾಗೂ ಜೂ ಮುಹಮ್ಮದ್ ರಫಿ ಖ್ಯಾತಿಯ ಗಾಯಕ ಜನಾಬ್ ಮುಹಮ್ಮದ್ ಹನೀಫ್ ಉಪ್ಪಳ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಯಂಕಾಲ 7 ಗಂಟೆಗೆ ಅಂತರಾಷ್ಟ್ರೀಯ ಖ್ಯಾತಿಯ ಠಾಗೂರ್ ದಾಸ್ ಬಳಗದಿಂದ ಬ್ಯಾರಿ ಗಝಲ್ ಕಾರ್ಯಕ್ರಮ ನಡೆಯಲಿದೆ. ಬ್ಯಾರಿ ಭಾಷಾಭಿಮಾನಿಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಪತ್ರಿಕಾ ಪ್ರಕಟಣೆ ತಿಳಿಸಿದೆ.