ವಾಮಾಚಾರ ಪ್ರಕರಣಕ್ಕೆ ತಿರುವು ► ಕಿರುಕುಳ ಆರೋಪದಲ್ಲಿ ಠಾಣೆಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಆ.07. ಮನೆಯ ಮುಂದೆ ಸ್ಥಳೀಯರೊಬ್ಬರು ವಾಮಾಚಾರ ಮಾಡಿರುವುದಲ್ಲದೆ, ಜಾಗದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರಕರ್ತ ಕಲ್ಲುಗುಡ್ಡೆ ಖಾದರ್ ಸಾಹೇಬ್ ಅವರು ಪತ್ನಿ ಅಮೀನ ಅವರು ಭಾನುವಾರ ಕಡಬ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಕಡಬ ಅಡ್ಡಗದ್ದೆ ನಿವಾಸಿ ಸ್ಯಾಮುವೆಲ್ ಜೋಸ್ ಎಂಬವರ ಪತ್ನಿ ಸಿನಿ ಜೋಸ್ ಎಂಬವರು ಸೋಮವಾರ ಕಡಬ ಠಾಣೆಗೆ ದೂರು ನೀಡಿ ತನ್ನ ಗಂಡನಿಗೆ ನಿರಂತರ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಖಾದರ್ ಸಾಹೇಬ್ ದಂಪತಿಯ ವಿರುದ್ಧ ದೂರು ನೀಡಿದ್ದಾರೆ.

ನನ್ನ ಪತಿ ಸ್ಯಾಮುವೆಲ್ ಜೋಸ್ ಅವರು ಕಲ್ಲುಗುಡ್ಡೆ ಖಾದರ್ ಸಾಹೇಬ್ ಅವರಿಂದ ಜಾಗ ಖರೀದಿಸಿ ಅದರಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಇದನ್ನು ಸಹಿಸದ ಅವರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಿ ಮಾನ ಹಾನಿ ಮಾಡಿರುತ್ತಾರೆ ಎಂದು ಸಿನಿ ಜೋಸ್ ಆರೋಪಿಸಿದ್ದಾರೆ. ತನ್ನ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ತಂದು ನಮ್ಮ ಮೇಲೆ ಪ್ರಕರಣ ದಾಖಲಿಸುಂತೆ ನೋಡಿಕೊಳ್ಳುತ್ತಿದ್ದಾರೆ. ಜಾಗದ ತಕರಾರಿನ ಹಿನ್ನೆಯಲ್ಲಿ ಪತ್ರಿಕೆಯಲ್ಲಿ ತಪ್ಪು ವರದಿ ನೀಡಿ ಅವಮಾನ ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧ ಪಡದ ದಲಿತ ಸಂಘಟನೆಯವರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಷಡ್ಯಂತ್ರ ನಡೆಸಲಾಗುತ್ತಿದೆ. ಭಾನುವಾರ ಖಾದರ್ ಸಾಹೇಬರ ಮನೆಯ ಮುಂದೆ ನನ್ನ ಪತಿ ವಾಮಾಚಾರ ಮಾಡಿದ್ದಾರೆ ಎಂದು ಸುಳ್ಳು ದೂರು ನೀಡಲಾಗಿದೆ. ಈ ವಿಚಾರದಲ್ಲಿ ನಾವು ಧಾರ್ಮಿಕ ಕ್ಷೇತ್ರದಲ್ಲಿ ಆಣೆ ಪ್ರಮಾಣಕ್ಕೂ ಸಿದ್ದರಿದ್ದೇವೆ. ವಿನಾಕಾರಣ ನನ್ನ ಪತಿಗೆ ಮಾನಸಿಕ ಹಿಂಸೆ ನೀಡಿ ತೊಂದರೆ ನೀಡುವುದನ್ನು ತಪ್ಪಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ದೂರು ನೀಡಿರುವ ಕಡಬ ಪೋಲೀಸರು ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ.

error: Content is protected !!
Scroll to Top