(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.19. ಕೆಎಸ್ಸಾರ್ಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಟ್ಯಾಂಕರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಬಸ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಿದರಾದರೂ ಬಸ್ ರಸ್ತೆ ಬದಿಯ ಚರಂಡಿಗೆ ವಾಲಿದ ಘಟನೆ ಬುಧವಾರದಂದು ಮಾಣಿಯಲ್ಲಿ ಸಂಭವಿಸಿದೆ.

ಸುಬ್ರಹ್ಮಣ್ಯದಿಂದ ಕಡಬ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಾಣಿ ಸಮೀಪದ ಅಳೀರ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬೇರೊಂದು ವಾಹನವನ್ನು ಒವರ್ ಟೇಕ್ ಮಾಡುತ್ತಿದ್ದ ಟ್ಯಾಂಕರ್ ಬಸ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಚರಂಡಿಗೆ ವಾಲಿ ನಿಂತಿದೆ. ಘಟನೆಯಲ್ಲಿ ನಿರ್ವಾಹಕನಿಗೆ ಗಾಯಗಳಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 40 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರು ಬಸ್ ನ ತುರ್ತು ನಿರ್ಗಮನದ ಬಾಗಿಲಿನ ಮೂಲಕ ಹೊರ ಬಂದಿದ್ದಾರೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
