ಕೋರಿಯಾರ್: ಮುಂದುವರಿದ ಅಕ್ರಮ ಮರಳುಗಾರಿಕೆ ➤ ಟಿಪ್ಪರ್ ವಶಪಡಿಸಿಕೊಂಡ ಸುಬ್ರಹ್ಮಣ್ಯ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜೂ.11. ಕೋಡಿಂಬಾಳ ಸಮೀಪದ ಕೋರಿಯಾರಿನಲ್ಲಿ ಅಕ್ರಮ ಮರಳುಗಾರಿಕೆಯು ರಾಜರೋಷವಾಗಿ ನಡೆಯುತ್ತಿದ್ದು, ಮಂಗಳವಾರದಂದು ದಾಳಿ ನಡೆಸಿದ ಸುಬ್ರಹ್ಮಣ್ಯ ಪೋಲಿಸರು ಒಂದು ಮರಳು ತುಂಬಿದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪ ಗ್ರಾಮದ ಕೇನ್ಯ ಭಾಗದಲ್ಲಿ ಮರಳು ತೆಗೆದು ಅದನ್ನು ಕೋಡಿಂಬಾಳ ಗ್ರಾಮದ ಕೋರಿಯಾರ್ ಮೂಲಕ ಸಾಗಿಸಲಾಗುತ್ತಿದೆ. ವಾರದ ಹಿಂದೆ ಖಾಸಗಿ ಚಾನೆಲ್ ನವರು ಅಕ್ರಮ ಮರಳು ದಂದೆಯ ಬಗ್ಗೆ ವರದಿ ಮಾಡಲು ಸ್ಥಳಕ್ಕೆ ತೆರಳಿದ್ದಾಗ ಅಕ್ರಮ ಮರಳು ದಂದೆಯಲ್ಲಿ ತೊಡಗಿದ್ದ ತಂಡವೊಂದು ಚಾನೆಲ್ ವರದಿಗಾರರಿಗೆ ಹಿಗ್ಗಾ ಮುಗ್ಗಾ ಥಳಿಸಿ, ಅವರ ಕ್ಯಾಮರ, ಮೊಬೈಲ್ ಗಳನ್ನು ನೀರಿಗೆ ಎಸೆದಿದ್ದು, ಘಟನೆಯ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಾದ ಬಳಿಕವೂ ಇಲ್ಲಿ ನಿರಂತರ ಮರಳುಗಾರಿಕೆ ನಡೆಯುತ್ತಿದೆ. ಒಂದೆಡೆ ನದಿಯಲ್ಲಿ ಮರಳುಗಾರಿಕೆ ನಡೆಸಲು ಸರಕಾರದಿಂದ ಅನುಮತಿ ಪಡೆದಿರುವ ಗುತ್ತಿಗೆದಾರರು ಪ್ರತಿ ದಿನ ಮರಳು ಸಾಗಾಟ ಮಾಡಲು ಆಯಾ ದಿನವೇ ಅನುಮತಿ ಪಡೆಯಬೇಕಿದ್ದರೂ ಅದನ್ನು ಪಡೆಯದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಸುಬ್ರಹ್ಮಣ್ಯ ಪೊಲೀಸರು ಟಿಪ್ಪರನ್ನು ವಶಪಡಿಸಿಕೊಂಡಿದ್ದಾರೆ‌.

Also Read  ಕಡಬ ತಾಲೂಕು ಗೌಡರ ಸಂಘದ ಅಧ್ಯಕ್ಷರ ಬಗ್ಗೆ ಅವಹೇಳನ ➤ ಯುವ ಸಮಿತಿಯಿಂದ ಖಂಡನೆ

ಸ್ಥಳೀಯ ಪಿಕಪ್ ಹಾಗೂ 407 ಟೆಂಪೋಗಳಲ್ಲಿ ಮರಳು ಸಾಗಿಸಲಾಗುತ್ತಿದೆ ಎಂಬ ಬಗ್ಗೆ ಸ್ಥಳೀಯ ವೆಬ್‌ಸೈಟ್ ಒಂದರ ವರದಿಗಾರರು ಸ್ಥಳದಲ್ಲೇ ಠಿಕಾಣಿ ಹೂಡಿದ್ದರಿಂದ ಅವರು ನೀಡಿದ ಮಾಹಿತಿಯ ಮೇರೆಗೆ ಸುಬ್ರಹ್ಮಣ್ಯ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ದಿನದ ಪರವಾನಿಗೆ ಪಡೆಯದೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೋಲಿಸರು ಬರುತ್ತಿರುವ ಮಾಹಿತಿ ಸಿಕ್ಕಿದೊಡನೆ ಎಲ್ಲ ಅಕ್ರಮ ಸಾಗಾಟದ ವಾಹನಗಳು ಅಲ್ಲಲ್ಲಿ ಠಿಕಾಣಿ ಹೂಡಿದ್ದವು.

ಮರಳಿನ ಅಭಾವದಿಂದ ಹಲವು ಮನೆ ಕೆಲಸಗಳು ಬಾಕಿಯಿದ್ದು, ಅವಶ್ಯಕತೆಗೆ ಅನುಸಾರವಾಗಿ ಮರಳು ಸಾಗಾಟ ಆಗುತ್ತಿದ್ದರೂ ಬೆಲೆ ಮಾತ್ರ ದುಪ್ಪಟ್ಟಾಗಿದೆ. ಮರಳು ಸಾಗಾಟಗಾರರು ಮಾತ್ರ ಕಷ್ಟಪಟ್ಟು ಮರಳು ತೆಗೆದರೂ ಲಾಭಾಂಶದಲ್ಲಿ ಅಧಿಕಾರಿಗಳಿಂದ ಹಿಡಿದು ಮಾಹಿತಿ ನೀಡುವ ಜನಗಳು, ಕೂಲಿ, ಬಾಡಿಗೆ, ಕಮಿಷನ್ ಎಲ್ಲಾ ಕೊಟ್ಟು ಒಂದಂಶವನ್ನು ಉಳಿಸಿಕೊಳ್ಳುತ್ತಾರಾದರೂ, ಸರಕಾರದ ಅವೈಜ್ಞಾನಿಕ ಮರಳು ನೀತಿಯಿಂದಾಗಿ ಜನರಿಗೆ ಮಾತ್ರ ಮರಳು ಚಿನ್ನದಂತಾಗಿದೆ.

Also Read  ಹೊಸಮಠ ಪ್ರಾ.ಕೃ.ಪ. ಸಹಕಾರಿ ಸಂಘದ ಮಹಾಸಭೆ ► ಹಿಂದಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಅವ್ಯವಹಾರ ಬಯಲಿಗೆ

error: Content is protected !!
Scroll to Top