ಪತ್ರಕರ್ತನ ಮನೆಯ ಮುಂದೆ ಗುಂಡು ಸೂಜಿ ಚುಚ್ಚಿದ ಸೌತೆಕಾಯಿ ► ವಾಮಾಚಾರ ಮಾಡಿರುವ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಆ.07. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪತ್ರಕರ್ತ ಖಾದರ್ ಸಾಹೇಬ್ ಅವರ ಮನೆಯ ಮುಂಭಾಗದಲ್ಲಿ ಭಾನುವಾರ ವಾಮಾಚಾರ ನಡೆಸಲಾಗಿದೆ ಎಂದು ಕಡಬ ಠಾಣೆಗೆ ದೂರು ನೀಡಲಾಗಿದೆ.

ಖಾದರ್ ಸಾಹೇಬ್ ಅವರ ಮನೆಯ ಅಂಗಳದಲ್ಲಿ ಸೌತೆ ಕಾಯಿ ಮೇಲೆ ಗುಂಡು ಸೂಜಿಗಳನ್ನು ಚುಚ್ಚಿ ಶಿಲುಬೆಯಾಕಾರ ಮಾಡಿರುವ ಚಿತ್ರಣ ಕಂಡು ಬಂದಿದ್ದು, ಇದರಿಂದ ಭಯಭೀತರಾದ ಮನೆಯವರು ಸ್ಥಳೀಯ ಮುಖಂಡರುಗಳು, ಜನಪ್ರತಿನಿಧಿಗಳು ಹಾಗೂ ಪೋಲೀಸರಿಗೆ ತಿಳಿಸಿದ್ದಾರೆ. ಕಡಬ ಠಾಣಾ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಊರಿನ ಜನರ ದಂಡೇ ಸ್ಥಳಕ್ಕೆ ಆಗಮಿಸಿ ಕೌತಕವನ್ನು ನೋಡಿ ಹೋಗಿದ್ದಾರೆ. ಈ ಬಗ್ಗೆ ಖಾದರ್ ಸಾಹೇಬ್ ಅವರ ಪತ್ನಿ ಅಮೀನಾ ಅವರು ಕಡಬ ಠಾಣೆಗೆ ದೂರು ನೀಡಿ ನಮ್ಮಿಂದ ಭೂಮಿ ಖರೀದಿಸಿದ ವ್ಯಕ್ತಿಯೊಬ್ಬರು ಮತ್ತಷ್ಟು ಭೂಮಿಯನ್ನು ಅತಿಕ್ರಮಣ ಮಾಡಿ ಸದಾ ಕಿರುಕುಳ ನೀಡುತ್ತಿದ್ದಾರೆ. ನಮ್ಮನ್ನು ಕಲ್ಲುಗುಡ್ಡೆಯಿಂದ ಓಡಿಸಬೇಕು ಎಂದು ಯತ್ನಿಸುತ್ತಿದ್ದು, ಅವರೇ ವಾಮಾಚಾರ ಮಾಡಿರಬಹುದಾಗಿದೆ. ಜಾಗದ ವಿಚಾರವಾಗಿ ನೂಜಿಬಾಳ್ತಿಲ ಗ್ರಾಮ ಸಭೆಯಲ್ಲಿ ನಡೆದಿರುವ ಚರ್ಚೆಯನ್ನು ಪತ್ರಿಕೆಗೆ ವರದಿ ಮಾಡಿರುವುದಕ್ಕೆ ನನ್ನ ಪತಿಗೆ ವಕೀಲರ ಮುಖಾಂತರ 25 ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟೀಸು ಕಳುಹಿಸಿದ್ದಾರೆ. ನಮ್ಮ ಜೀವಕ್ಕೆ ತೊಂದರೆಯಿದ್ದು, ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಪೋಲೀಸರು ದೂರು ಸ್ವೀಕರಿಸಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಮಹಿಳೆಗೆ ಸದಾ ಕಿರುಕುಳು ನೀಡುತ್ತಿರುವುದರಂದ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳೆ ಹಾಗೂ ಮಕ್ಕಳ ಹಕ್ಕು ರಕ್ಷಣ ಸಮಿತಿಯ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪನವರಿಗೆ ದೂರು ನೀಡಿದ್ದಾರೆ.

error: Content is protected !!
Scroll to Top